

ಬೀಳಗಿ: ಜ್ಞಾನದಲ್ಲಿ ಜಗತ್ತನ್ನೇ ಗೆಲ್ಲುವ ಶಕ್ತಿ ಅಡಗಿದೆ ಎಂದು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಟಕ್ಕಳಕಿ ಆರ್‌ಸಿಯ ಜ್ಞಾನ ಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಂಸ್ಥೆಯ 21ನೇ ವಾರ್ಷಿಕ ಸ್ನೇಹ ಸಮ್ಮೇಳನ, ಬಹುಮಾನ ವಿತರಣೆ ಮತ್ತು ಜ್ಞಾನ ವೈಭವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಪ್ರಾಥಮಿಕ ಹಂತದ ಶಿಕ್ಷಣವೇ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುತ್ತದೆ. ಮಕ್ಕಳಲ್ಲಿ ಕಲಿಕೆ ಬಗ್ಗೆ ಹೆಚ್ಚು ಅಸಕ್ತಿ ವಹಿಸಬೇಕು ಎಂದರು.
ಶಿಕ್ಷಣ ಸಂಸ್ಥೆಗಳು ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಅಂತಹದರಲ್ಲಿ ಗಂಗಾಧರ ಉಗ್ರಾಣ ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆ ತೆರೆಯುವ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ ಎಂದರು.
ವಿಜಯಪುರದ ಸಿದ್ಧೇಶ್ವರ ತರಬೇತಿ ಕೇಂದ್ರದ ಅಧ್ಯಕ್ಷ ಸುರೇಶ ಎಸ್. ಜತ್ತಿ ಮಾತನಾಡಿ, ಗಂಗಾಧರ ಉಗ್ರಾಣ ಅವರು ಮಕ್ಕಳ ಕಲಿಕೆ ಹಾಗೂ ಅವರ ಮುಂದಿನ ಭವಿಷ್ಯವನ್ನು ರೂಪಿಸುವ ಛಲ ತೊಟ್ಟಿದ್ದಾರೆ. ಈ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯಲ್ಲಿ ನಾನು ಕೂಡ ಭಾಗಿಯಾಗುತ್ತೇನೆ ಎಂದರು.
ಮಹಿಳಾ ಪತ್ರಿನಿಧಿ ಶೋಭಾ ಹಣಮಂತ ನಿರಾಣಿ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಅಂತಹ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವ ದೇಶ ನಮ್ಮದಾಗಿದೆ ಎಂದರು.
ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಮಮತಾಜ್ ಎಂ. ಟಕ್ಕಳಕಿ ಉಪನ್ಯಾಸ ನೀಡಿದರು. ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಗಂಗಾಧರ ಉಗ್ರಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸಯ್ಯ ಎಸ್. ಹಿರೇಮಠ ಸಾನ್ನಿಧ್ಯ ವಹಿಸಿದ್ದರು.
ಡಾ. ಪ್ರಶಾಂತ ಎಸ್. ತೆಗ್ಗಿ, ಪಪಂ ಅಧ್ಯಕ್ಷ ಮುತ್ತು ಬೋರ್ಜಿ, ಗ್ರಾಪಂ ಅಧ್ಯಕ್ಷೆ ಪ್ರೇಮಾ ಮಾದರ, ಬಿಜೆಪಿ ತಾಲೂಕಾಧ್ಯಕ್ಷ ಹೊಳಬಸು ಬಾಳಶಟ್ಟಿ, ಕಾನಿಪ ಸಂಘದ ತಾಲೂಕಾಧ್ಯಕ್ಷ ಸುಭಾಸ ರಾಠೋಡ, ಮಂಜುನಾಥ ಅಂತರಗೊಂಡ, ಸಿಆರ್‌ಸಿ ಅಯ್ಯನಗೌಡ ಪಾಟೀಲ, ಶಿಲ್ಪಾ ಎಸ್. ಮುದನೂರ, ಈರಪ್ಪ ಎಂ. ಬಾಗಲಕೋಟೆ, ಜ್ಯೋತಿ ಬ್ಯಾಂಕಿನ ಅಧ್ಯಕ್ಷ ಶಿವಪ್ಪ ಅವಟಿ, ನಾಗಮ್ಮ ಎಂ.ಅಂತರಗೊಂಡ ಮತ್ತಿತರರಿದ್ದರು.