ವಿಜಯಪುರ : ಪೋಕ್ಸೋ ಕಾಯ್ದೆ ಕುರಿತು ಅರಿವು ಅಗತ್ಯ

20220912_161828
ವಿಜಯಪುರ ನಗರದ ಜಿಪಂ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೋಕ್ಸೋ ಮತ್ತು ಜೆಜೆ ಆ್ಯಕ್ಟ್ ಕುರಿತ ಕಾರ್ಯಾಗಾರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವೆಂಕಣ್ಣ ಬಿ. ಹೊಸಮನಿ ಉದ್ಘಾಟಿಸಿ ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗೀಮಠ, ಹಿರಿಯ ಪತ್ರಕರ್ತ ಸುಶಿಲೇಂದ್ರ ನಾಯಕ, ದೇವೇಂದ್ರ ಹೆಳವರ ಇದ್ದರು.
Published on

ವಿಜಯಪುರ : ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕ್ಸೋ ಕಾಯ್ದೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವೆಂಕಣ್ಣ ಬಿ. ಹೊಸಮನಿ ಹೇಳಿದರು.

ಇಲ್ಲಿನ ಜಿಪಂ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಸೋಮವಾರ ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ಪೋಕ್ಸೋ ಮತ್ತು ಜೆಜೆ ಆ್ಯಕ್ಟ್ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಪ್ರತಿಯೊಬ್ಬರೂ ಈ ನೆಲದ ಕಾನೂನನ್ನು ಗೌರವಿಸಬೇಕು. ನಾವು ಕಾನೂನು ರಕ್ಷಣೆ ಮಾಡಿದರೆ ಕಾನೂನು ನಮ್ಮನ್ನು ರಕ್ಷಣೆ ಮಾಡುತ್ತದೆ. ಕಾನೂನು ಅರಿವು ಇಲ್ಲದಿದ್ದರೆ ಅಪರಾಧ ಪ್ರಕರಣಗಳು ಹೆಚ್ಚುತ್ತವೆ ಎಂದರು.

ಹದಿನೆಂಟು ವರ್ಷ ವಯೋಮಿತಿಯೊಳಗಿನ ಯಾವುದೇ ಮಕ್ಕಳನ್ನು ಅಪ್ರಾಪ್ತ ವಯಸ್ಸಿನವರೆಂದು ಪರಿಗಣಿಸಲಾಗುತ್ತಿದೆ. ಪೋಕ್ಸೋ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ. ಇಂಥ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ಅಕ್ಷಮ್ಯ ಅಪರಾಧ. ಪೋಕ್ಸೋ ಕಾಯ್ದೆಯಡಿ ಯಾವುದೇ ವ್ಯಕ್ತಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಸಾಬೀತಾದರೆ ಅಂಥ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದರು.

ಲೈಂಗಿಕ ದೌರ್ಜನ್ಯಗಳಂಥ ಪ್ರಕರಣಗಳು ನಡೆದಾಗ ಮಾಧ್ಯಮದವರು ಬಹಳ ಜಾಗರೂಕತೆಯಿಂದ ವರದಿ ಮಾಡಬೇಕು. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರ ಹೆಸರು ಹಾಗೂ ಭಾವಚಿತ್ರ, ಅವರ ತಂದೆ-ತಾಯಿಗಳ, ಪಾಲಕರು, ಪೋಷಕರ ಹೆಸರು, ವಾಸಿಸುವ ಸ್ಥಳದ ಬಗ್ಗೆ ಮಾಹಿತಿ ಮಾಧ್ಯಮದಲ್ಲಿ ಬರದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗೀಮಠ ಉಪನ್ಯಾಸ ನೀಡಿ, ಪೋಕ್ಸೋ ಕಾಯ್ದೆ ಬಹಳ ಸೂಕ್ಷ್ಮವಾಗಿದ್ದು, ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಹೇಗೆ ವರದಿ ಮಾಡಬೇಕೆಂಬುದನ್ನು ತಿಳಿಸಿದರು.

ವರದಿ ಮಾಡುವಾಗ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಗುವಿನ ಬಗ್ಗೆ ವೈಯಕ್ತಿಕವಾದ ಯಾವುದೇ ಮಾಹಿತಿ ಕೊಡಬಾರದು. ಒಂದು ವೇಳೆ ಇದನ್ನು ಉಲ್ಲಂಘಿಸಿ ಮಾಹಿತಿ ನೀಡಿದ್ದೇ ಆದರೆ ಯಾರಾದರೂ ಅವರ ಮೇಲೆ ದೂರು ನೀಡಿದಲ್ಲಿ ಅವರಿಗೆ ಶಿಕ್ಷೆಯಾಗುತ್ತದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಶಾಂತಾ ಮ.ಬೇಲಾಳ, ದೇವೇಂದ್ರ ಹೆಳವರ, ಫಿರೋಜ್ ರೋಜಿನದಾರ, ಅವಿನಾಶ ಬಿದರಿ, ರಾಹುಲ ಆಪ್ಟೆ, ದೀಪಕ್ ಶಿಂತ್ರೆ, ಕೆ.ಕೆ.ಕುಲಕರ್ಣಿ, ಕೌಶಲ್ಯಾ ಪನಾಳಕರ, ಸುಶಿಲೇಂದ್ರ ನಾಯಕ, ಪಿ.ಎಸ್. ಹಿರೇಮಠ, ಟಿ.ಕೆ.ಮಲಗೊಂಡ ಹಾಗೂ ಪತ್ರಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net