ಅರಿತು ಬಾಳುವುದೇ ನೈಜ ಸಾಮರ್ಥ್ಯ: ಮುಖ್ಯಶಿಕ್ಷಕಿ ಪರಿಮಳ ಹೇಳಿಕೆ

Bel_Rudset
Published on

ಬೆಳ್ತಂಗಡಿ: ಇನ್ನೊಬ್ಬರನ್ನು ತುಳಿದು ಬದುಕುವ ಸಾಮರ್ಥ್ಯ ವ್ಯರ್ಥ. ಆದರೆ ಇನ್ನೊಬ್ಬರನ್ನು ಅರಿತು ಜತೆಯಾಗಿ ಬದುಕಿ ಬಾಳುವುದು ಸಾಮರ್ಥ್ಯ. ಬೇರೆ-ಬೇರೆ ಊರುಗಳಿಂದ ಬೇರೆ-ಬೇರೆ ಹಿನ್ನ್ನೆಲೆ ಹೊಂದಿರುವವರು ರುಡ್‌ಸೆಟ್ ಸಂಸ್ಥೆಗೆ ಬಂದು ಒಟ್ಟಾಗಿ ಒಂದೇ ಮನೆಯವರಂತೆ ಕಲಿತಿದ್ದಾರೆ. ಈ ಸಂಸ್ಥೆಯಲ್ಲಿ ವೃತ್ತಿ ಕೌಶಲದ ಜತೆಗೆ ಜೀವನ ಕೌಶಲ ಕಲಿಸಿ ಅದನ್ನು ಅಳವಡಿಸಿಕೊಂಡು ನಡೆಯಿರಿ ಎಂದು ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಪರಿಮಳ ಹೇಳಿದರು.

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನದ ವಸ್ತ್ರ ವಿನ್ಯಾಸ ತರಬೇತಿ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ವೃತ್ತಿ ಜೀವನದ ಜತೆಗೆ ಸಂಸಾರಕ್ಕೂ ಒಂದಷ್ಟು ಸಮಯ ಕೊಡಬೇಕು ಎಂಬುವುದು ನೆನಪಿರಲಿ. ವಸ್ತ್ರ ವಿನ್ಯಾಸಕ್ಕೆ ಯಾವತ್ತೂ ಬೇಡಿಕೆ ಇಲ್ಲವೆಂದು ಆಗುವುದಿಲ್ಲ. ಪ್ರತಿಯೊಬ್ಬರೂ ಹೊಸ ವಿನ್ಯಾಸಗಳನ್ನು ಕೇಳುತ್ತಾರೆ. ಎಷ್ಟು ಹೊಸತನ ಕಲಿಯುತ್ತೀರಿ ಅಷ್ಟು ಕೆಲಸ ನಿಮಗೆ ಸಿಗುತ್ತದೆ. ನೀವು ಕಂಡ ಕನಸನ್ನು ನನಸು ಮಾಡಿಕೊಳ್ಳಿ ಎಂದರು.

ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಮತ್ತು ಬ್ಯಾಂಕ್‌ನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ. ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದರು.

ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು. 33 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಮೋನಿಕಾ, ಪುಣ್ಯಶ್ರೀ, ಯಾಮಿನಿ ತರಬೇತಿಯ ಅನುಭವ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net