ತಿಳಿದು ಬದುಕುವುದು ಸರ್ವಶ್ರೇಷ್ಠ

NRGL RAMBHAPURI
Published on

ಮಾನವ ಧರ್ಮ ಮಂಟಪ (ಅಬ್ಬಿಗೇರಿ)
ಮಾನವ ಜೀವನ ಅಮೂಲ್ಯ. ಬದುಕಿಗೆ ಭಗವಂತ ಕೊಟ್ಟ ಕೊಡುಗೆ ಅಪಾರ. ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ. ತುಳಿದು ಬದುಕಿದವರು ಬೇಗ ಅಳಿಯುತ್ತಾರೆ. ತಿಳಿದು ಬದುಕುವವರು ಅಳಿದ ಮೇಲೂ ಉಳಿಯುತ್ತಾರೆ. ಆ ಪರಮ ಜ್ಞಾನವನ್ನು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಕಾಣಬಹುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶನಿವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಮೂರನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮನುಷ್ಯನಲ್ಲಿರುವ ಅಸುರೀ ಗುಣಗಳು ನಾಶವಾಗಿ ದೈವೀ ಗುಣಗಳು ಬಲಗೊಳ್ಳಬೇಕಾಗಿದೆ. ಯಾವಾಗಲೂ ನಾಶವಾಗದೇ ಇರುವುದು ಧರ್ಮ. ಇದನ್ನು ನಾಶಪಡಿಸುವ ಶಕ್ತಿ ಯಾರಿಗೂ ಯಾವ ಕಾಲಕ್ಕೂ ಇಲ್ಲ. ಉದಾತ್ತ ಜೀವನ ಮೌಲ್ಯ ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೆ ನಮ್ಮೆಲ್ಲರ ಗುರಿಯಾಗಬೇಕು. ಸಂವೇದನಾಶೀಲ ಜೀವನಕ್ಕೆ ಆದರ್ಶ ಚಿಂತನೆಗಳ ಅವಶ್ಯಕತೆಯಿದೆ. ವೀರಶೈವ ಧರ್ಮದ ಸಂಸ್ಕಾರಗಳು ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಕಾರಣವಾಗಿವೆ. ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ, ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ ಬಹು ಮುಖ್ಯವೆಂದು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದೆ ಎಂದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ‘ಗುರು’ ಇಂಗ್ಲಿಷ್ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಮನುಷ್ಯನ ಆದರ್ಶ ಜೀವನ ಉಜ್ವಲಗೊಳ್ಳಲು ಅರಿವು ಆಚಾರ ಬೇಕು. ಧರ್ಮದಲ್ಲಿರುವ ಧಾರ್ವಿುಕ ಮತ್ತು ಸಾಮಾಜಿಕ ಚಿಂತನೆಗಳು ಜೀವನದ ವಿಕಾಸಕ್ಕೆ ಮುಖ್ಯವಾಗಿವೆ. ಅರಿವು ಪಡೆಯಲು ಗುರುವಿನ ಅಮೂಲ್ಯ ಮಾರ್ಗದರ್ಶನ ಬೇಕು. ಸಮಾಜದಲ್ಲಿ ಗುರುವಿನ ಪಾತ್ರ ಎಷ್ಟು ಮಹತ್ವವಿದೆ ಎಂಬುದನ್ನು ಗುರು ಕೃತಿ ಮನವರಿಕೆ ಮಾಡುತ್ತದೆ. ಅತ್ಯಂತ ಸಂತೋಷದಿಂದ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದೇನೆ. ಆರೋಗ್ಯ ಪೂರ್ಣ ಸಮಾಜಕ್ಕೆ ಧರ್ವಚರಣೆ ಬಹು ಮುಖ್ಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳು ನಿರಂತರ ಧರ್ಮ ಪ್ರಸಾರ ಮಾಡುತ್ತ ಬಂದಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಘೊಷಣೆ ಮಾಡಿ ಭಾವೈಕ್ಯ-ಸಾಮರಸ್ಯ ಉಂಟು ಮಾಡಲು ಶ್ರಮಿಸಿದ್ದನ್ನು ಮರೆಯಲಾಗದು ಎಂದರು.

ಎಮ್ಮಿಗನೂರು ಹಂಪಿ ಸಾವಿರದೇವರಮಠದ ವಾಮದೇವ ಮಹಾಂತ ಶಿವಾಚಾರ್ಯರು, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಪ್ರಶಸ್ತಿ: ತೆಲಂಗಾಣ ರಾಜ್ಯ ಮೆಹಬೂಬನಗರದ ಹಿರಿಯ ಸಾಹಿತಿ ಪಂ. ಆರ್.ಎಂ. ಪ್ರಭುಲಿಂಗ ಶಾಸ್ತ್ರಿ ಅವರಿಗೆ 2024ನೇ ಸಾಲಿನ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು. ನರೇಗಲ್ಲ ಮಲ್ಲಿಕಾರ್ಜುನ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು.

ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು. ಬೀರೂರು ರುದ್ರಮುನಿ ಶಿವಾಚಾರ್ಯರು, ಶಾಸಕ ಜಿ.ಎಸ್. ಪಾಟೀಲ, ಎನ್.ಎಚ್. ಕೋನರೆಡ್ಡಿ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಸಚಿವ ಬಿ.ಆರ್. ಯಾವಗಲ್, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಇದ್ದರು.

ಬಸವರಾಜ ಪಲ್ಲೇದ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರ್ವಹಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೊಷ, ಗದಗಿನ ವೀರೇಶ ಕಿತ್ತೂರ ಮತ್ತು ಮಹಿಳಾ ರುದ್ರ ಬಳಗದವರಿಂದ ಸಂಗೀತ ಸೇವೆ ಜರುಗಿತು. ಶ್ರೀ ಪೀಠದ ಸಿಬ್ಬಂದಿ ಹಾಗೂ ಭಕ್ತರಿಂದ ಆಕರ್ಷಕ ನಜರ ಸಮರ್ಪಣೆ ಜರುಗಿತು.

ಅನ್ನ ದಾಸೋಹ: ಲಕ್ಷೆ್ಮೕಶ್ವರದ ಆನಂದಸ್ವಾಮಿ ಜಿ. ಗಡ್ಡದೇವರಮಠ ಹಾಗೂ ಪರಿವಾರದವರಿಂದ ಅನ್ನ ದಾಸೋಹದ ಸೇವೆ ಜರುಗಿತು.

ಗುರುರಕ್ಷೆ: ನಾಗಠಾಣ ಸಗರ ಹಿರೇಮಠದ ಸೋಮೇಶ್ವರ ಶ್ರೀ, ಬೆಳ್ಳಾವಿ ಕಾರದಮಠದ ಕಾರದ ವೀರಬಸವ ಸ್ವಾಮೀಜಿ, ಅಬ್ಬಿಗೇರಿ ಅರಳೆಲೆಮಠದ ವಿಜಯಮಹಾಂತ ಸ್ವಾಮೀಜಿ, ಫಾಲಾಕ್ಷಯ್ಯ ಶಾಸ್ತ್ರಿಗಳು ಅರಳೆಲೆಮಠ, ಯಲಬುರ್ಗ ದರಮುರಡಿಮಠದ ಬಸವಲಿಂಗೇಶ್ವರ ಶ್ರೀ, ಶಂಭುಲಿಂಗ ಶಾಸ್ತ್ರಿ ಕವಿಗಳು ಮಾಳಶೆಟ್ಟಿ, ಡಾ. ಸುರೇಶ ಅವರಡ್ಡಿ, ಭೈಲಪ್ಪ ತಳವಾರ, ಶಾಂತವ್ವ ಬಸಪ್ಪ ಹನಮನಾಳ, ಸಂಗಮ್ಮ ಹಿರೇಮಠ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.


ಧರ್ಮ ಸಮ್ಮೇಳದಲ್ಲಿಂದು
ಸೂಡಿ ಜುಕ್ತಿಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಬಬಲಾದ ದೇವಾಪುರ ಸ್ಟೇಷನ್ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ಮಳಲಿ ಸಂಸ್ಥಾನಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡುವರು. ದಾವಣಗೆರೆಯ ಎಚ್.ಎಂ. ಬಸವರಾಜಯ್ಯ (ಅಕ್ಕಿ ರಾಜು) ಅವರಿಗೆ ರಂಭಾಪುರಿ ಯುವಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್​ರಾದ ವಿಜಯ ಸಂಕೇಶ್ವರ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ವಿಜಯ ಮೆಟಗುಡ್ಡ, ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು. ಆಹಾರ-ಆರೋಗ್ಯ ಮತ್ತು ಅಧ್ಯಾತ್ಮ ಕುರಿತು ರಾಯಚೂರಿನ ಉಪನ್ಯಾಸಕಿ ಡಾ. ಅರುಣಾ ಹಿರೇಮಠ ಉಪನ್ಯಾಸ ನೀಡುವರು.
ವೀರಾಪುರ ಕಲಕೇರಿ ಮುದಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರದ ಕುಂಚಿಟಿಗರಮಠದ ಡಾ. ಹನುಮಂತನಾಥ ಸ್ವಾಮೀಜಿ, ಯಂಕಂಚಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಲಾದಗಿ ಪಂಚಗೃಹ ಹಿರೇಮಠದ ಗಂಗಾಧರ ಸ್ವಾಮೀಜಿ ಗೌರವ ಶ್ರೀರಕ್ಷೆ ಸ್ವೀಕರಿಸುವರು.
ಶ್ರೀ ಷಣ್ಮುಖಪ್ಪಜ್ಜನವರು ಧರ್ಮರಮಠ, ಡಾ. ಆರ್.ಬಿ. ಬಸವರೆಡ್ಡರ್, ಷಣ್ಮುಖಯ್ಯ ಶಾಸ್ತ್ರೀಗಳು ಹಿರೇಮಠ, ಮಾರುತಿ ಬಂಡಿವಡ್ಡರ, ಶಿವಾನಂದಯ್ಯ ಜುಕ್ತಿಹಿರೇಮಠ, ರುದ್ರಪ್ಪ ಮಾರನಬಸರಿ, ಮಲ್ಲನಗೌಡ್ರು ದೇಸಾಯಿ, ಪರತಪ್ಪ ಪಟ್ಟಣಶೆಟ್ಟಿ, ಶರಣಪ್ಪ ನರಗುಂದ ಅವರು ಗುರು ರಕ್ಷೆ ಸ್ವೀಕರಿಸುವರು.
ಕೊತಬಾಳ ಗ್ರಾಮದ ಶ್ರೀ ಅರುಣೋದಯ ಕಲಾ ತಂಡದವರಿಂದ ಜಾನಪದ ನೃತ್ಯ. ಶ್ರೀ ವೀರೇಶ ಕಿತ್ತೂರು ಅವರು ಸಂಗೀತ ಪ್ರಸ್ತುತಪಡಿಸುವರು. ಶಿವಮೊಗ್ಗದ ಶಾಂತಾ ಆನಂದ ನಿರ್ವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net