

ರಾಯಚೂರು: ಈಶಾನ್ಯ ಪದವೀಧರ ಮತ ಕ್ಷೇತ್ರಕ್ಕೆ ಜೂ.3ರಂದು ಮತದಾನ ನಡೆಯಲಿದ್ದು, ಸಾರ್ವತ್ರಿಕ ಚುನಾವಣೆ ಮತ್ತು ಇದಕ್ಕೂ ಮತದಾನದಲ್ಲಿ ಬದಲಾವಣೆ ಇರುವ ಕಾರಣ ಅಕಾರಿಗಳು ನಿಯಮಗಳನ್ನು ಸಮರ್ಪಕವಾಗಿ ಅರಿತುಕೊಳ್ಳಬೇಕು ಎಂದು ಅಪರ ಜಿಲ್ಲಾಕಾರಿ ಅಶೋಕ ದುಡಗುಂಟಿ ಹೇಳಿದರು.
ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ನಿಯೋಜನೆಗೊಂಡ ಮತಗಟ್ಟೆ ಅಕಾರಿಗಳಿಗೆ ಬುಧವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಈ ಚುನಾವಣೆಯಲ್ಲಿ ಮತಯಂತ್ರಗಳ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಾಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 30 ಮತ್ತು ನಗರದಲ್ಲಿ 7 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮತದಾನದ ಹಿಂದಿನ ದಿನ ಮತಗಟ್ಟೆಗೆ ತೆರಳಿ ಮತದಾನಕ್ಕೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ಪರಿಶೀಲನೆ ಮಾಡಿಕೊಂಡಿರಬೇಕು. ನಿಯಮಗಳನ್ನು ಶಿಸ್ತು ಬದ್ಧವಾಗಿ ಪಾಲಿಸಬೇಕು ಎಂದು ಹೇಳಿದರು.
ಚುನಾವಣೆ ತರಬೇತುದಾರ ಸದಾಶಿವಪ್ಪ ಮಾತನಾಡಿ, ಜೂ.2ರಂದು ಮತಗಟ್ಟೆಗಳಿಗೆ ತೆರಳುವ ಮುನ್ನ ಬ್ಯಾಲೆಟ್ ಪೇಪರ್, ಮತಪೆಟ್ಟಿಗೆ, ಡಿಕ್ಲರೇಷನ್ ಅರ್ಜಿ ಸೇರಿದಂತೆ ಮತದಾನಕ್ಕೆ ಬೇಕಿರುವ ಸಲಕರಣೆಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು.
ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಮತಗಟ್ಟೆ ಅಕಾರಿಗಳು ಮತದಾನದ ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಯಾವುದೇ ಅವಘಡಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಮಾಗದರ್ಶನಕ್ಕಾಗಿ ಸೆಕ್ಟರ್ ಅಕಾರಿಗಳನ್ನು ನೇಮಕ ಮಾಡಲಾಗಿದ್ದು, ತರಬೇತಿ ಸಂದರ್ಭದಲ್ಲಿ ನೀಡಲಾಗಿರುವ ಮಾರ್ಗಸೂಚಿ ಕೈಪಿಡಿಯನ್ನು ಸಂಪೂರ್ಣವಾಗಿ ಅವಲೋಕಿಸಿ ಅರಿತುಕೊಂಡು ಯಾವುದೇ ಲೋಪವಾಗದಂತೆ ಕ್ರಮಕೈವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ನಿಯೋಜನೆಗೊಂಡ ಮತಗಟ್ಟೆ ಅಕಾರಿಗಳು, ಸಹಾಯಕ ಮತಗಟ್ಟೆ ಅಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.