ಸಂಚಾರ ನಿಯಮ ಅರಿಯಿರಿ

21 web
Published on

ಜಾಗೃತಿ ಕಾರ್ಯಕ್ರಮದಲ್ಲಿ ಎಸ್ಪಿ ಬಿ.ನಿಖಿಲ್​ ಸಲಹೆ

ಕೋಲಾರ: ಅಪಘಾತ ಎನ್ನುವುದು ಹೇಳಿ ಕೇಳಿ ಆಗುವುದಿಲ್ಲ. ಯಾವಾಗ ಬೇಕಾದರೂ ಸಂಭವಿಸಬಹುದು, ಹೀಗಾಗಿ ಎಚ್ಚರಿಕೆಯಿಂದ ಇದ್ದರೆ ಜೀವನವು ಸುಗಮವಾಗಿ ಇರುತ್ತದೆ, ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಅಪರಾಧ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​ ಹೇಳಿದರು.
ನಗರದ ಪ್ರವಾಸಿ ಮಂದಿರ ಮುಂಭಾಗ ಜಿಲ್ಲಾ ಪೊಲೀಸ್​ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಪಂಚ ಪಾಂಡವರ ಸೇವಾ ಟ್ರಸ್ಟ್​ನಿಂದ ಮಂಗಳವಾರ ಆಯೋಜಿಸಿದ್ದ ಏಕಕಾಲದಲ್ಲಿ 200 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇನ್ನು 18 ವರ್ಷದ ತುಂಬಿದ ಬಳಿಕ ನೀವು ವಾಹನ ಚಾಲನೆ ಮಾಡುತ್ತೀರಿ. ಹಾಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ, ಕಡ್ಡಾಯ ಹೆಲ್ಮೆಟ್​ ಧರಿಸಬೇಕು. ಸಂಚಾರಿ ನಿಯಮ ಪಾಲನೆ ಕುರಿತು ಸಾರ್ವಜನಿಕರಿಗೂ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇನ್ನು ಪ್ರಮುಖವಾಗಿ ನಮಗೆ ಆಕ್ಸಿಜನ್​ ಸಿಗುವುದು ಗಿಡ, ಮರಗಳಿಂದ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾದಕ ದ್ರವ್ಯಗಳಿಂದ ದೂರ ಇರುವುದು, ಸಂಚಾರಿ ನಿಯಮಗಳ ಪಾಲನೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಡುವ ಸೂತ್ರಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು. ಮಾದಕ ವಸ್ತುಗಳ ದ್ರವ್ಯ ವಸ್ತುಗಳಿಂದ ದೂರವಿದ್ದಷ್ಟು ಒಳ್ಳೆಯದು, ಸಹವಾಸ ದೋಷಗಳಿಗೆ ಒಳಗಾಗಿ ವ್ಯಸನಿಗಳಾದರೆ ಅದು ನಿಮಗೆ ಹಾಗೂ ಇಡೀ ಕುಟುಂಬಕ್ಕೆ ಕೆಟ್ಟ ಹೆಸರು ತಂದುಕೊಡುತ್ತದೆ. ಸಮಾಜದಲ್ಲೂ ಒಳ್ಳೆಯವರಾಗಿ ಗುರುತಿಸಿಕೊಳ್ಳಲಾಗುವುದಿಲ್ಲ. ತಂದೆ&ತಾಯಿಗೆ ನೆಮ್ಮದಿಯ ಜೀವನ ದೊರೆಯಬೇಕಾದರೆ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಬಂಗಾರಪೇಟೆ ವೃತ್ತದಲ್ಲಿನ ಡಾ.ಬಿ.ಆರ್​.ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಲಾಯಿತು. ಶಾಲಾ&ಕಾಲೇಜು ವಿದ್ಯಾರ್ಥಿಗಳು ಡೂಂ ಲೈಟ್​ ಸರ್ಕಲ್​ವರೆಗೆ ಮೆರವಣಿಗೆ ನಡೆಸಿ, ಪರಿಸರ, ಮಾದಕ ವಸ್ತುಗಳ ಬಳಕೆಯಿಂದ ದೂರವಿರುವುದು, ಸಂಚಾರಿ ನಿಯಮಗಳ ಪಾಲನೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.


ವ್ಯಸನಮುಕ್ತ ಜಿಲ್ಲೆಯಾಗಿಸಿ: ಗಿಡ ನೆಡುವುದು, ಮಾದಕ ವಸ್ತುಗಳಿಂದ ದೂರ ಇರುವುದೇ ವಿದ್ಯಾರ್ಥಿಗಳ ಘಟ್ಟದಲ್ಲಿ ಪ್ರಮುಖ ವಿಚಾರವಾಗಿರುತ್ತದೆ. ಮಾದಕ ವಸ್ತುಗಳ ಸೇವನೆ ಅಪರಾಧವಾಗಿದ್ದು, ಈ ಬಗ್ಗೆ ಈಗಾಗಲೇ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಸಿಗಳನ್ನು ಹೆಚ್ಚಾಗಿ ನೆಡುವ ಕಾರ್ಯ ಆಗಬೇಕು. ಮನೆ, ಶಾಲಾ&ಕಾಲೇಜು ಬಳಿ ಗಿಡ ನೆಟ್ಟು ಪರಿಸರ ಉಳಿಸಬೇಕು, ಕೋಲಾರವನ್ನು ನಶೆ, ಪ್ಲಾಸ್ಟಿಕ್​, ವ್ಯಸನಮುಕ್ತ ಜಿಲ್ಲೆಯಾಗಿಸಲು ತಾವೆಲ್ಲರೂ ಪಣ ತೊಡಬೇಕು ಎಂದು ಹಿರಿಯ ಸಿವಿಲ್​ ನ್ಯಾಯಾಧೀಶರಾದ ಸುನೀಲ್​ ಎಸ್​.ಹೊಸಮನಿ ಹೇಳಿದರು.


ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ತಂದೆ, ತಾಯಿ ತಮ್ಮ ಮಕ್ಕಳ ಮೇಲೆ ಕನಸುಗಳನ್ನು ಹೊತ್ತು ಶಾಲಾ&ಕಾಲೇಜಿಗೆ ಕಳುಹಿಸುತ್ತಾರೆ. ಆದರ ಹಿಂದಿನ ಕಷ್ಟ ಅರ್ಥ ಮಾಡಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮರಾಗಲು ಸಾಧ್ಯ. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು, ಅದು ಬಿಟ್ಟು ಆಸೆ, ಆಮಿಷಗಳಿಗೆ ಒಳಗಾದರೆ ಅಪಾಯ ತಪ್ಪಿದಲ್ಲ ಎಂದು ಅಬಕಾರಿ ಉಪ ಆಯುಕ್ತ ರಮೇಶ್​ ಕುಮಾರ್​ ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಎಂ.ಎಚ್​.ನಾಗ್ತೆ, ಪಿಎಸ್​ಐ ಶಂಕರಾಚಾರಿ, ವಕೀಲರ ಸಂಘದ ಅಧ್ಯಕ್ಷ ಮುನೇಗೌಡ, ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆಯ ಸಂಟನಾ ಆಯುಕ್ತ ವಿ.ಬಾಬು, ಪಂಚ ಪಾಂಡವರು ಸೇವಾ ಟ್ರಸ್ಟ್​ ಅಧ್ಯಕ್ಷ ರಾಮಾಚಾರಿ, ಸಮಾಜ ಸೇವಕ ಶೇಷಗಿರಿ ನಾಯಕ್​, ಪದಾಧಿಕಾರಿಗಳಾದ ಅರುಣ್​, ಗಜ, ಯಶು, ಆರ್​.ಕೆ.ರಾಜು, ಮುಖಂಡ ಜಗದೀಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net