ಹಕ್ಕು ಕೇಳುವ ಮೊದಲು ಬಾಧ್ಯತೆ ಅರಿತುಕೊಳ್ಳಿ

03-03-Shiva-1
ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಥಮ ಮಹಿಳಾ ಸಮಾವೇಶವನ್ನು ಮಹಾಸಭಾ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಕ್ತಾಂಬ ಬಸವರಾಜ ಉದ್ಘಾಟಿಸಿದರು. ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಪದಾಕಾರಿಗಳಾದ ರೇಖಾ ಕೇಶವರೆಡ್ಡಿ, ಮಧುರಾ ಅಶೋಕ, ಪಾರ್ವತಿ ಕರೆಡ್ಡಿ, ನಿರ್ಮಲಾ ಬೆಣ್ಣೆ, ವಿಜಯರಾಜೇಶ್ವರಿ, ಪ್ರತಿಭಾ ಗೋನಾಳ ಇದ್ದರು.
Published on

ರಾಯಚೂರು: ಮಹಿಳೆಯರು ತಮ್ಮ ಹಕ್ಕುಗಳನ್ನು ಕೇಳುವುದರ ಜತೆಗೆ ತಮ್ಮ ಬಾಧ್ಯತೆಗಳನ್ನು ಅರಿತುಕೊಂಡು ಮುನ್ನಡೆಯಬೇಕಾಗಿದೆ. ಮಹಿಳೆಯರಲ್ಲಿ ಪ್ರಭುದ್ಧತೆ, ಗಾಂರ್ಭೀತೆ ಬಂದಾಗ ಮಾತ್ರ ಗೌರವ ತಾನಾಗೇ ಸಿಗುತ್ತದೆ ಎಂದು ತುಮಕೂರು ವಿವಿಯ ನಿವೃತ್ತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಖಂಡಿಮಠ ಹೇಳಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಥಮ ಮಹಿಳಾ ಸಮಾವೇಶ ಮತ್ತು ಸಾಧಕರಿಗೆ ಅಕ್ಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಮಹಿಳೆಯರು ಸಂದಿಗ್ಧ, ಸವಾಲಿನ ಸ್ಥಿತಿಯಲ್ಲಿದ್ದಾರೆ. ವ್ಯವಸ್ಥೆ ರೂಪಿಸಿದ ಆದರ್ಶದ ಚೌಕಟ್ಟಿನಲ್ಲಿ ಬಂತರಾಗಿರಬೇಕೇ ಅಥವಾ ಹೊರಬರಬೇಕೆ ಹಾಗೂ ಸೌಕರ್ಯ ಹೆಚ್ಚಿದಂತೆ ಉಂಟಾಗುತ್ತಿರುವ ಬದಲಾವಣೆಗೆ ಒಗ್ಗಿಕೊಳ್ಳಬೇಕೆ, ಬೇಡವೇ ಎನ್ನುವ ದ್ವಂದತೆಯಲ್ಲಿದ್ದಾರೆ.
ವ್ಯಕ್ತಿ ಸ್ವಾತಂತ್ರ ಮತ್ತು ವೈಚಾರಿಕತೆ ಹೆಸರಿನಲ್ಲಿ ಸಮಾಜ ಛೀದ್ರವಾಗುತ್ತಿದೆ. ಒಡೆದು ಆಳುವ ನೀತಿಯ ತೂಗುಗತ್ತಿ ಅಪಾಯದ ಮುನ್ಸೂಚನೆ ನೀಡುತ್ತಿದೆ. ಈ ಬಗ್ಗೆ ಪರಾಮರ್ಶೆ ಮಾಡುವ ಮೂಲಕ ಒಡೆದು ಆಳುವ ತಂತ್ರದ ವಿರುದ್ಧ ಎಚ್ಚೆತ್ತುಕೊಂಡು ಹೆಜ್ಜೆ ಇಡಬೇಕಾಗಿದೆ ಎಂದು ಡಾ.ಮೀನಾಕ್ಷಿ ಖಂಡಿಮಠ ಹೇಳಿದರು.
ಮಹಾಸಭಾ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮುಕ್ತಾಂಬ ಬಸವರಾಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಗೆ ಸಾಮಾಜಿಕ, ರಾಜಕೀಯವಾಗಿ ಹೇಗೆ ಬೆಳೆಯಬೇಕು, ಸಂಸಾರವನ್ನು ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ಸಲಹೆ ಬೇಕಾಗಿದೆ.
ಹೆಣ್ಣು ಕಾಲಕಾಲಕ್ಕೆ ಪರಿವರ್ತನೆಯಾಗುತ್ತಾ ಮುಂದೆ ಸಾಗಬೇಕಾಗಿದೆ. ಹಿಂದಿನಿಂದಲೂ ಮಹಿಳೆ ತನ್ನ ಸ್ವಾತಂತ್ರ, ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದು, ಈಗ ರಾಜಕೀಯದಲ್ಲಿ ಶೇ.33ರಂದು ಮೀಸಲಾತಿ ನೀಡಲಾಗಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿದೆ ಎಂದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಘೋಷಣೆ ಮಾಡಿದ್ದು, ಇದರಿಂದಾಗಿ ಮಹಿಳೆಯರು ಪುರುಷರ ಜತೆಗೆ ಸಮಬಲದ ಹೋರಾಟ ನಡೆಸಬಹುದಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಡಾ.ವಸುಂಧರಾ ಪಾಟೀಲ್, ಡಾ.ದೀಪಶ್ರೀ ಪಾಟೀಲ್, ಡಾ.ಸರ್ವಮಂಗಳಾ ಸಕ್ರಿ, ಲಕ್ಷ್ಮಿ ಮರೇಗೌಡ, ಚಂದ್ರಕಲಾ, ಗುರಮ್ಮ, ಶಕುಂತಲಮ್ಮ, ಆರ್.ಕೆ.ಕಮಲಮ್ಮ, ಶೋಭಾ ರೇವಣಸಿದ್ಧಯ್ಯ, ಚೆನ್ನಮ್ಮರಿಗೆ ಅಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಗರನಹಳ್ಳಿ, ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಮಹಿಳಾ ಘಟಕದ ಅಧ್ಯಕ್ಷ ಮಧುರಾ ಆಶೋಕ, ಜಿಲ್ಲಾಧ್ಯಕ್ಷ ರೇಖಾ ಕೇಶವರೆಡ್ಡಿ, ಮುಖಂಡ ರವಿ ಬೋಸರಾಜು, ಪದಾಕಾರಿಗಳಾದ ಪಾರ್ವತಿ ಕಾರಡ್ಡಿ, ವಿಜಯರಾಜೇಶ್ವರಿ, ಸರಸ್ವತಿ ಪಾಟೀಲ್, ನಿರ್ಮಲಾ ಬೆಣ್ಣೆ, ಪ್ರತಿಭಾ ಗೋನಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net