

ಮದ್ದೂರು: ಪ್ರತಿಯೊಬ್ಬರು ನಾಡಪ್ರಭು ಕೆಂಪೇಗೌಡರ ವ್ಯಕ್ತಿತ್ವ, ಕೀರ್ತಿ ಹಾಗೂ ಅವರ ಕಾರ್ಯಸಾಧನೆಗಳ ಅತ್ಯಮೂಲ್ಯ ಸಾರವನ್ನು ಅರಿತು, ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಡ ಪ್ರಭು ಕೆಂಪೇಗೌಡರು ರಣವೀರರಾಗಿದ್ದು, ನ್ಯಾಯ, ನಿಷ್ಠೆ ಹಾಗೂ ಧರ್ಮಕ್ಕೆ ಹೆಸರಾಗಿದ್ದರು. ಅವರ ಆಡಳಿತದ ದೂರದೃಷ್ಟಿ ಫಲವಾಗಿ ಅಂದೆಯೇ ಜಗತ್ತಿನ ಎಲ್ಲಾ ವರಹಗಳು ವಿನಿಮಯವಾಗುತ್ತಿದ್ದ, ಪ್ರಪಂಚದ ಏಕೈಕ ನಗರ ಎಂಬ ಹಿರಿಮೆಗೆ ಬೆಂಗಳೂರು ಪಾತ್ರವಾಗಿತ್ತು ಎಂದು ವಿವರಿಸಿದರು.
ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣದ ಜತೆಗೆ ವಿವಿಧ ಕುಲ ಕಸುಬುಗಳುಳ್ಳ ಸಮುದಾಯದವರು ನೆಲೆಸಲು 64 ಪೇಟೆಗಳನ್ನು ಕಟ್ಟಿ ಬೆಂಗಳೂರು ನಗರ ಕುಶಲತೆಯ ತವರಾಗಿಸಿ ಅಭಿವೃದ್ಧಿಗೆ ಅಂದೇ ಪೀಠಿಕೆ ಹಾಕಿದರು. ಸಾವಿರ ಕೆರೆಗಳನ್ನು ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅದರ ಫಲವಾಗಿ ಇಂದು ಬೆಂಗಳೂರು ಬೃಹತ್ ನಗರವಾಗಿ ವಿಶ್ವದ ಗಮನ ಸೆಳೆದಿದೆ ಎಂದರು.
ಭಾರತಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ.ಬೋರೇಗೌಡ ಅವರು ನಾಡಪ್ರಭು ಕೆಂಪೇಗೌಡರ ಕುರಿತು ವಿಶೇಷ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉದಯಕಾಲ ದಿನಪತ್ರಿಕೆಯ ಸಂಪಾದಕ ಪುಟ್ಟಲಿಂಗೇಗೌಡ, ರೈತ ಮುಖಂಡ ಅಣ್ಣೂರು ಮಹೇಂದ್ರ, ಸಾಮಾಜಿಕ ಕಾರ್ಯಕರ್ತ ಹುಲಿಗೆರೆಪುರ ಮಹಾದೇವು, ಬಿ.ಇಡಿಯಲ್ಲಿ ಚಿನ್ನದ ಪದಕ ಪಡೆದ ನವ್ಯರಾಜ್ ವಳಗೆರೆಹಳ್ಳಿ ಹಾಗೂ ಸಮಾಜ ಸೇವೆ ವಿದ್ಯಾವರ್ಧಕ ಕಾಲೇಜಿನ ನಿವೃತ್ತ ಗ್ರಂಥಪಾಲಕ ಕೆ.ಟಿ.ಕೃಷ್ಣಪ್ಪ ಅವರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬೃಹತ್ ಮೆರವಣಿಗೆ: ಕೆಂಪೇಗೌಡರ ಭಾವಚಿತ್ರವನ್ನು ಬೆಳ್ಳಿರಥದಲ್ಲಿಸಿ ವಿವಿಧ ಕಲಾತಂಡಗಳು ಹಾಗೂ ಶಾಲಾ ಮಕ್ಕಳೊಂದಿಗೆ ಬೃಹತ್ ಸಾಂಸ್ಕೃತಿಕ ಮೆರವಣಿಗೆ ಪಟ್ಟಣದ ಶ್ರೀ ಉಗ್ರ ನರಸಿಂಹನರಸಿಂಹಸ್ವಾಮಿ ದೇವಸ್ಥಾನದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಿತು. ಕ್ರೀಡಾಂಗಣದಲ್ಲಿ ಶಾಲಾಮಕ್ಕಳ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು. ಪುರಸಭೆ ಮುಖ್ಯಾಧಿಕಾರಿ ಕರಿಬಸವಯ್ಯ, ಬಿಇಒ ಸಿ.ಎಚ್.ಕಾಳೀರಯ್ಯ, ಆಖಿಲಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ನ.ಲಿ.ಕೃಷ್ಣ, ತಾಲೂಕು ಅಧ್ಯಕ್ಷ ಶಿವಲಿಂಗೇಗೌಡ, ಕಾರ್ಯದರ್ಶಿ ಬಸವರಾಜ್, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಶಿವಪ್ಪ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಉಮಾಶಂಕರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಮುಖಂಡ ಆತಗೂರು ವೆಂಕಟಚಲುವಯ್ಯ ಮತ್ತಿತರರಿದ್ದರು.