

ಗಜೇಂದ್ರಗಡ: ಜಮೀನಿನಲ್ಲಿ ಬೆವರು ಹರಿಸಿ ದುಡಿದು ಬಿತ್ತಿ, ಬೆಳೆಯುವ ರೈತರು ದೇಶದ ಮೂಲ ಮಾಲೀಕರು. ಆದರೆ, ರಾಜಕಾರಣಿಗಳು, ಮಧ್ಯವರ್ತಿಗಳು ಹಾಗೂ ಬ್ಯಾಂಕಿನವರ ಕೈಯಲ್ಲಿ ಸಿಕ್ಕು ಗುಲಾಮರಾಗಿದ್ದಾರೆ ಎಂದು ಕರ್ನಾಟಕ ರೈತ ಸೇನಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ಲಕ್ಕಲಕಟ್ಟಿ ಗ್ರಾಮದ ಅಳೇಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಅಳೇಬಸವೇಶ್ವರ ರೈತರ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಸಂಘಟಿತರಾಗಿ ಸಾಂಪ್ರದಾಯಿಕ ಹಾಗೂ ಹೊಸ ತಂತ್ರಜ್ಞಾನದ ಮೂಲಕ ಉತ್ತಮ ಬೆಳೆ ಬೆಳೆದು ಸಂಘದಿಂದ ಫಸಲು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಗಿಡಮರಗಳನ್ನು ಕಡಿಯುವುದರಿಂದ ಸಕಾಲದಲ್ಲಿ ಮಳೆಯಾಗುತ್ತಿಲ್ಲ. ಅಲ್ಲದೆ, ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಹಾಗೂ ಮನುಷ್ಯರ ಆರೋಗ್ಯ ಹಾಳಾಗುತ್ತಿದೆ. ದೇಶದಲ್ಲಿ ಪ್ರತಿವರ್ಷ 3 ಲಕ್ಷ ಹೆಕ್ಟೇರ್ ಭೂಮಿ ರೆಡ್ ಬೆಲ್ಟ್ ಆಗುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದಿನ 5 ವರ್ಷಗಳಲ್ಲಿ ಆಹಾರದ ಕೊರತೆ ಉಂಟಾಗುವ ಅಪಾಯವಿದೆ ಎಂದರು.
ಎಲ್ಲ ರೈತರು ಕಾನೂನು ತಿಳಿದುಕೊಂಡು ರಾಜಕಾರಣಿಗಳಿಂದ ಅಂತರ ಕಾಯ್ದುಕೊಂಡು ಜಾಗೃತರಾಗಿರಬೇಕು. ಸಂಘದಲ್ಲಿ ಜಾತಿ ಭೇದ ಮಾಡದೆ, ಚುನಾವಣೆಗೆ ಸಂಘ ಬಳಕೆ ಮಾಡಿಕೊಳ್ಳದೆ ರೈತರ ಸಮಸ್ಯೆಗಳ ಪರಿಹಾರಕ್ಕೆ ರೈತ ಸಂಘವನ್ನು ಬಳಸಿಕೊಳ್ಳಬೇಕು ಎಂದರು.
ನಿವೃತ್ತ ತೆರಿಗೆ ಇಲಾಖೆ ಅಧಿಕಾರಿ ಸೋಮಪ್ಪ ಬೆನಕನವಾರಿ ಮಾತನಾಡಿದರು. ಪುಣ್ಯಾರಣ್ಯ ಪತ್ರಿವನಮಠದ ಡಾ.ಸಿದ್ದವೀರ ಶಿವಾಚಾರ್ಯರು, ಮುರನಾಳ ಮಠದ ಜಗನ್ನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನಿವೃತ್ತ ಅರಣ್ಯ ಇಲಾಖೆ ಅಧಿಕಾರಿ ಪಿ.ಸಿ.ಹಿರೇಮನಿ, ನಿಂಗಪ್ಪ ಭಗವತಿ, ಬಸಯ್ಯ ಗುರುನಂಜಯ್ಯನಮಠ, ಶೇಖಪ್ಪ ಬೆನಕನವಾರಿ, ಶಿವರುದ್ರಪ್ಪ ಮಾರನಬಸರಿ, ತಿಪ್ಪಣ್ಣ ಮಾವಿನಇಟಗಿ, ಈರಪ್ಪ ಕೊಪ್ಪದ, ವಸಂತ ಜಾವೂರ, ಶರಣಪ್ಪ ಆಡೂರ, ಶರಣಪ್ಪ ಹೊಸಳ್ಳಿ ಇತರರು ಇದ್ದರು.