

ಎನ್.ಆರ್.ಪುರ: ಡಾ. ಅಂಬೇಡ್ಕರ್ ಬರೆದ ಸಂವಿಧಾನವನ್ನು ವಿದ್ಯಾರ್ಥಿಗಳು, ಸಾರ್ವಜನಿಕರು ಓದಬೇಕು ಎಂದು ತಹಸೀಲ್ದಾರ್ ತನುಜಾ ಟಿ. ಸವದತ್ತಿ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ದೇಶದ ಬೃಹತ್ ಸಂವಿಧಾನದ ಆಶಯ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಪಪಂ ಸದಸ್ಯೆ ಜುಬೇದಾ ಮಾತನಾಡಿ, ದೇಶದಲ್ಲಿರುವ ಪ್ರತಿ ಧರ್ಮಕ್ಕೂ ಒಂದೊಂದು ಗ್ರಂಥವಿದೆ. ಆದರೆ ಡಾ. ಅಂಬೇಡ್ಕರ್ ಬರೆದ ಸಂವಿಧಾನ ಎಲ್ಲ ಭಾರತೀಯರ ಧರ್ಮ ಗ್ರಂಥವಾಗಿದೆ ಎಂದರು.
ತಾಪಂ ಸಹಾಯಕ ನಿರ್ದೇಶಕ ಮನೀಶ್ ಭಾರತ ದೇಶದ ಸಂವಿಧಾನದ ಪೀಠಿಕೆ ವಾಚನ ಮಾಡಿದರು. ಶಾಲಾ ಮಕ್ಕಳು ಮೆರವಣಿಗೆ ನಡೆಸಿದರು. ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಶಿಕ್ಷಣ ಇಲಾಖೆ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿತ್ರಕಲೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಬಹುಮಾನ ನೀಡಲಾಯಿತು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಿರಂಜನಮೂರ್ತಿ, ಪಪಂ ಸದಸ್ಯರಾದ ಕುಮಾರಸ್ವಾಮಿ, ಮುಕುಂದ, ಮಹಮ್ಮದ್ ವಾಸಿಂ, ಡಿಎಸ್‌ಎಸ್ ಮುಖಂಡರಾದ ಡಿ.ರಾಮು, ನಾಗರಾಜ, ಶಿವಣ್ಣ, ಭವಾನಿ, ಶ್ರೀನಾಥ್, ರಮೇಶ್ ಇತರರಿದ್ದರು.