

ಹೊಸದುರ್ಗ: ಶುಚಿ, ಗುಣಮಟ್ಟದ ಆಹಾರ, ನಿತ್ಯ ಯೋಗಾಭ್ಯಾಸದ ಮಹತ್ವ ಅರಿತರೆ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ ಎಂದು ಆಯುರ್ವೇದ ತಜ್ಞ ಡಾ. ಎಂ.ಎಲ್.ನದಾಫ್ ತಿಳಿಸಿದರು.
ಸರ್ಕಾರಿ ಆಯುರ್ವೇದ ಆಸ್ಪತ್ರೆ ಹಾಗೂ ಆಯುಷ್ ಆರೋಗ್ಯ ಕ್ಷೇಮ ಕೇಂದ್ರದ ವತಿಯಿಂದ ತಾಲೂಕಿನ ಕಂಗುವಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಆಯುಷ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವ ಬಿಪಿ, ಶುಗರ್ ಸೇರಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಆಹಾರ ಕ್ರಮ ಹಾಗೂ ಯೋಗಾಬ್ಯಾಸದ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಆಯುಷ್ ಇಲಾಖೆ ಶ್ರಮಿಸುತ್ತಿದೆ ಎಂದರು.
ರೋಗಗಳ ಕುರಿತು ಜನರಲ್ಲಿರುವ ಅನಗತ್ಯ ಭಯ ಹಾಗೂ ಸಂಶಯಗಳನ್ನು ದೂರ ಮಾಡುವ ಪ್ರಯತ್ನವನ್ನು ಆರೋಗ್ಯ ಮೇಳ ಮಾಡುತ್ತಿದೆ. ರೋಗ ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ಕಾಯಿಲೆ ಬರದಂತೆ ತಡೆಯುವ ಮಾರ್ಗಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಮಂದಿಗೆ ಬಿಪಿ, ಶುಗರ್ ಪರೀಕ್ಷೆ ನಡೆಸಿ, ಔಷಧ ವಿತರಿಸಲಾಯಿತು. ಡಾ. ಮಹೇಶ್ ಬಡಿಗೇರ್, ಸಿಎಚ್‌ಒ ಕಾವ್ಯಾ, ಎಎನ್‌ಎಂ ಭಾರತಿ, ಯೋಗ ಶಿಕ್ಷಕರಾದ ಅರುಣಾಕುಮಾರಿ, ಮರುಳಸಿದ್ದಪ್ಪ, ಸುಧಾ, ಮೀನಾ, ಪ್ರೇಮಾ, ರಾಧಾಮಣಿ, ಮಮತಾ ಮತ್ತಿತರಿದ್ದರು.