

ಹುಬ್ಬಳ್ಳಿ: ಮುಂಬರುವ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಬಹುದು. ಈ ನಿಟ್ಟಿನಲ್ಲಿ ಜಾಗೃತಿ ಅತ್ಯಗತ್ಯ. ನೀರಿನ ಮಹತ್ವ, ಬಳಕೆಯ ಮಿತಿ ಕುರಿತು ಎಲ್ಲರೀ ಅರಿತುಕೊಳ್ಳಬೇಕಿದೆ ಎಂದು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಅಧ್ಯಕ್ಷೆ ಡಾ. ರೀಟಾ ಹಂಡಾ ಹೇಳಿದರು.
ಎಂ.ಕೆ. ಡೆವಲಪರ್ಸ್, ಗ್ಲೋಬಲ್ ಗಾರ್ನರ್, ಎನೆಜಿಕ್ ಇಂಡಿಯಾ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಸಹಯೋಗದಲ್ಲಿ ಇಲ್ಲಿನ ಐಬಿಎಂಆರ್ ಕಾಲೇಜ್ನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ‘ಪಾನಿಪೇ ಚರ್ಚಾ‘ ಹಾಗೂ ‘ತಾರಸಿ ಮೇಲೆ ಸಾವಯವ ತೋಟ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು ಬಹಳಷ್ಟು ದೂರದವರೆಗೆ ನಡೆದು ನೀರು ತರುತ್ತಿದ್ದರು. ಆದರೀಗ ಮನೆ ಮನೆಗೆ ನೀರು ಬರುತ್ತಿದೆ. ಆದರೂ ನೀರಿನ ತತ್ವಾರ ಹೆಚ್ಚಿದೆ. ಈ ನಿಟ್ಟಿನಲ್ಲಿ ನೀರಿನ ಮಹತ್ವ ಅರಿತು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಯುವಜನ ಸೇವಾ ಇಲಾಖೆ ನಿವೃತ್ತ ಅಧಿಕಾರಿ ಕೆ. ಶಂಕರ ಮಾತನಾಡಿ, ಹಸಿ ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಸಾವಯವ ತರಕಾರಿ ಬೆಳೆದು ಊಟ ಮಾಡುವುದು ಇನ್ನೂ ಒಳ್ಳೆಯದು. ತಾರಸಿ ತೋಟ ರಚಿಸುವುದು ಸಂಕೀರ್ಣ ಕೆಲಸವಲ್ಲ. ಇದಕ್ಕೆ ತಾಳ್ಮೆ ಮತ್ತು ಸಮಯ ಅಗತ್ಯ. ಸ್ವಲ್ಪ ದಿನ ಮೀಸಲಿಟ್ಟರೆ ವರ್ಷ ಗಟ್ಟಲೆ ಹಸಿ ಸಾವಯವ ತರಕಾರಿ ತಿಂದು ಆರೋಗ್ಯದಿಂದ ಇರಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಶಿವಕುಮಾರ ಕೊಟೂರಶೆಟ್ಟರ್ ಮಾತನಾಡಿ, ಜಗತ್ತಿನಲ್ಲಿ ಊಟದ ಪದ್ಧತಿ ಹಾಗೂ ಜಲ ನೀತಿ ಬಲ್ಲವನೆ ಸಂತೋಷದಿಂದ ಜೀವನ ಸಾಗಿಸುತ್ತಾನೆ ಎಂದು ತಿಳಿಸಿದರು.
ಡಿ. ಸಂತೋಷಕುಮಾರ ಮಾತನಾಡಿ, ನೀರಿನ ಬಗ್ಗೆ ನಮಗೆ ಗೊತ್ತಿರುವುದು ಎರಡೇ ಸಂಗತಿ. ಕಲುಷಿತ ಮತ್ತು ಶುದ್ಧ ನೀರು. ಯಾವ ನೀರು ಬಳಕೆ ಮಾಡಿದರೆ ದೀರ್ಘಾಯುಷಿಗಳಾಗುತ್ತೇವೆ ಎಂಬುದನ್ನು ಜಪಾನಿನ ವಿಜ್ಞಾನಿಗಳು ಶೋಧಿಸಿದ್ದಾರೆ ಎಂದು ವಿವರಿಸಿದರಲ್ಲದೇ, ಪ್ರಾಜೆಕ್ಟರ್ ಮೂಲಕ ತಿಳಿಸಿದರು.
ಆರ್.ವಿ. ವೈಶಿಷ್ಟ್ಯ ಅಧ್ಯಕ್ಷ ರವೀಂದ್ರ ರಾಮದುರ್ಗ, ಜೈ ರೇಣುಕಯ್ಯ ಸಂಸ್ಥಾನಮಠ, ರಾಜಶೇಖರ ಪಾಟೀಲ ಇತರರು ಇದ್ದರು.