

ಅರಕಲಗೂಡು: ಭಾರತದ ಸಂವಿಧಾನ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಕೆ.ನಾಗೇಶ ಮೂರ್ತಿ ತಿಳಿಸಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಅಭಿಯೋಜನೆ ಇಲಾಖೆ ಸಹಯೋಗದಲ್ಲಿ ಭಾನುವಾರ ಪಟ್ಟಣದ ವಕೀಲರ ಭವನದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ವಿಶ್ವದ ಎಲ್ಲ ದೇಶಗಳ ಸಂವಿಧಾನಗಳ ಅಧ್ಯಯನ ನಡೆಸಿ ಅವುಗಳಲ್ಲಿನ ಉತ್ತಮ ಅಂಶಗಳನ್ನು ಆಯ್ದುಕೊಂಡು ಭಾರತಕ್ಕೆ ಉತ್ತಮ ಸಂವಿಧಾನವನ್ನು ನೀಡಿದೆ. ಸಂವಿಧಾನದ ಅಂಶಗಳನ್ನು ಕೇವಲ ಉಲ್ಲೇಖಿಸಿದರೆ ಸಾಲದು. ಬದಲಾಗಿ ಅದನ್ನು ಪಾಲನೆ ಮಾಡಿದಾಗ ಸಂವಿಧಾನದ ಆಶಯಗಳು ಈಡೇರಲು ಸಾಧ್ಯ. ಸಂವಿಧಾನ ನೀಡಿರುವ ಹಕ್ಕಿನಲ್ಲಿ ಮತದಾನದ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಇದರ ಮಹತ್ವ ಅರಿತು ನಡೆಯಬೇಕು ಎಂದರು.
ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಪ್ರೀತಿ ಎಲ್.ಮಳವಳ್ಳಿ ಪ್ರಮಾಣ ವಚನ ಬೋಧಿಸಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಂ.ರಘು, ವಕೀಲರ ಸಂಘದ ಅಧ್ಯಕ್ಷ ಕೆ.ಆರ್. ವಿಜಯಕುಮಾರ್ ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ಎಚ್.ಡಿ.ರವಿಚಂದ್ರ, ಖಜಾಂಚಿ ಎಸ್.ಎ. ಕೃಷ್ಣ, ವಕೀಲರಾದ ಶಂಕರಯ್ಯ, ಎಸ್.ಪಿ. ಜಯಪ್ಪ, ಬಿ.ಸಿ. ರಾಜೇಶ್, ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಇದ್ದರು.