

ಹೊನ್ನಾವರ: ನಂಬಿಕೆ, ಆಚರಣೆಗಳು ಹಾಗೂ ಮೂಢನಂಬಿಕೆಗಳ ನಡುವಿನ ವ್ಯತ್ಯಾಸವನ್ನು ತಿಳಿಯಬೇಕಿದೆ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಹೇಳಿದರು.
ಇಲ್ಲಿಯ ಎಸ್‌ಡಿಎಂ ಪದವಿ ಕಾಲೇಜಿನ ವಿದ್ಯಾರ್ಥಿ ಒಕ್ಕೂಟ ಹಾಗೂ ಯೂತ್ ರೆಡ್‌ಕ್ರಾಸ್ ಘಟಕ ಆಶ್ರಯದಲ್ಲಿ ಆಯೋಜಿಸಿದ್ದ ‘ಪವಾಡ ಬಯಲು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಆವಿಷ್ಕಾರಗಳಾಗಿರುವ ಆಧುನಿಕ ಕಾಲಘಟ್ಟದಲ್ಲೂ ವೈಜ್ಞಾನಿಕ ಮನೋಭಾವದ ಕೊರತೆ ಕಾಡುತ್ತಿರುವುದು ವಿಪರ್ಯಾಸದ ಸಂಗತಿ. ಶೂನ್ಯದಿಂದ ಸೃಷ್ಟಿ ಸಾಧ್ಯವಿಲ್ಲ ಎನ್ನುವ ವೈಜ್ಞಾನಿಕ ಸತ್ಯವನ್ನು ಮನಗಾಣಬೇಕಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪವಾಡ ಬಯಲು ಕಾರ್ಯಕ್ರಮ ಪ್ರಸ್ತುತಪಡಿಸಿದ್ದು ಮುಂದಿನ ದಿನಗಳಲ್ಲಿ ಜನರಲ್ಲಿ ಅರಿವು ಮೂಡಿಸಲು ಪರಿಷತ್ ವತಿಯಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ಸಂಘಟಿಸುವ ಯೋಜನೆ ಇದೆ ಎಂದರು.
ಪಿ.ವಿ. ಸಿದ್ದಲಿಂಗಮ್ಮ ಸಹಕರಿಸಿದರು. ಪ್ರಾಚಾರ್ಯೆ ಡಾ. ರೇಣುಕಾದೇವಿ ಗೋಳಿಕಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿಹಾರಿಕಾ ಭಟ್ಟ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಯೂತ್ ರೆಡ್‌ಕ್ರಾಸ್ ಘಟಕದ ಸಂಚಾಲಕ ಡಾ. ಎಂ.ಜಿ. ಹೆಗಡೆ ಸ್ವಾಗತಿಸಿದರು. ಹಿರಿಯ ಪ್ರಾಧ್ಯಾಪಕ ಡಾ. ಡಿ.ಎಲ್. ಹೆಬ್ಬಾರ, ಪ್ರಧಾನ ಕಾರ್ಯದರ್ಶಿ ಜೀವನ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಡಾ. ಜಿ.ಎನ್.ಭಟ್ಟ ವಂದಿಸಿದರು.