ಶಿಬಿರದ ಮಾಹಿತಿ ತಿಳಿದು ದೈನಂದಿನ ಕೆಲಸ ನಿರ್ವಹಿಸಿ; ಡಾ.ಸಿ.ಪ್ರಶಾಂತ್

WhatsApp Image 2022-10-13 at 5.18.32 PM
Published on

ಮಡಿಕೇರಿ: ಅಂಧ ವಿಶೇಷಚೇತನರು ಶಿಬಿರಗಳಲ್ಲಿ ನೀಡಲಾಗುವ ಮಾಹಿತಿ ತಿಳಿದುಕೊಂಡು ದೈನಂದಿನ ಕೆಲಸ ನಿರ್ವಹಿಸುವಂತಾಗಬೇಕು ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಜಿಲ್ಲಾ ಸಂಚಾಲಕ ಡಾ.ಸಿ.ಪ್ರಶಾಂತ್ ಕವಿಮಾತು ಹೇಳಿದರು.


ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್ ಇವರ ಸಹಭಾಗಿತ್ವದಲ್ಲಿ ಅಂಧ ವಿಶೇಷ ಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ಕಲಿಕಾ ಶಿಬಿರಕ್ಕೆ ನಗರದ ಭಾರತೀಯ ರೆಡ್‌ಕ್ರಾಸ್ ಭವನದಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದರು.


ಸರ್ಕಾರದ ಜತೆ ಸರ್ಕಾರೇತರ ಸಂಸ್ಥೆ ಅಂಧ ವಿಶೇಷಚೇತನರಿಗೆ ಸಮುದಾಯದ ಸಹಭಾಗಿತ್ವದಲ್ಲಿ ಸ್ಥಳ ಪರಿಜ್ಞಾನ ಮತ್ತು ಚಲನವಲನ ಬಗ್ಗೆ ಮಾಹಿತಿ ನೀಡುವ ಶಿಬಿರವನ್ನು ನಾಲ್ಕು ದಿನಗಳ ಕಾಲ ಏರ್ಪಡಿಸಲಾಗಿದೆ. ಅಂಧ ವಿಶೇಷ ಚೇತನರು ಸಹ ಇತರರಂತೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವಂತಾಗಲು ಶಿಬಿರ ಏರ್ಪಡಿಸಲಾಗಿದೆ. ಅಂಧ ವಿಶೇಷಚೇತನರು ಶಿಬಿರದಲ್ಲಿ ನೀಡಲಾಗುವ ಮಾಹಿತಿಯನ್ನು ತಿಳಿದುಕೊಂಡು ದೈನಂದಿನ ಕೆಲಸಗಳನ್ನು ನಿರ್ವಹಿಸುವಂತಾಗಬೇಕು ಎಂದರು.


ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ವಿಶ್ವ ದೃಷ್ಠಿ ದಿನ ಪ್ರಯುಕ್ತ ಶಿಬಿರ ಏರ್ಪಡಿಸಲಾಗಿದ್ದು, ಅಂಧ ವಿಶೇಷ ಚೇತನರಿಗೆ ಬೆಳಕು ದೊರೆಯುವಂತಾಗಬೇಕು ಎಂದು ಆಶಿಸಿದರು.


ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ಕೆ.ಜಿ.ವಿಮಲ ಮಾತನಾಡಿ, ಅಂಧ ವಿಶೇಷಚೇತನರಿಗೆ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಬ್ರೈಲ್ ಕಿಟ್, ಲ್ಯಾಪ್‌ಟಾಪ್, ವಿದ್ಯಾರ್ಥಿ ವೇತನ ದೊರೆಯಲಿದೆ. ಹಾಗೆಯೇ ಅಂಧ ಮಹಿಳೆಯರಿಗೆ ಶಿಶುಪಾಲನಾ ಭತ್ಯೆ ನೀಡಲಾಗುತ್ತದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್‌ನ ಪ್ರಸಾದ್ ಗೌಡ, ಕಾರ್ಯಕ್ರಮ ವ್ಯವಸ್ಥಾಪಕ ಅಂಕಚಾರಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಬೋರಯ್ಯ ಹಾಗೂ ಶಿಬಿರದಲ್ಲಿ ೧೬ ಕ್ಕೂ ಹೆಚ್ಚು ಅಂಧ ವಿಶೇಷ ಚೇತನರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net