ವಕ್ಫ್ ಕಾನೂನು ಅರಿತು ಮಾತನಾಡಿ; ಶಾಸಕ ಯತ್ನಾಳಗೆ ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಸಲಹೆ

S M PATIL GANIHAR WOKF PROPERTY PRESS MEET
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ದಲಿತ ಮುಖಂಡ ನಾಗರಾಜ ಲಂಬು, ಡಾ.ರವಿ ಬಿರಾದಾರ, ಫಯಾಜ್ ಕಲಾದಗಿ ಇದ್ದಾರೆ.
Published on

ವಿಜಯಪುರ: ವಕ್ಫ್ ಆಸ್ತಿ ದಾನ ನೀಡುವಂಥದ್ದು. ದೇವರ ಹೆಸರಿಗೆ ಕೆಲವರು ಬಿಟ್ಟು ಕೊಟ್ಟ ಆಸ್ತಿ. ಹೇಗೆ ಮುಜರಾಯಿ ದೇವಸ್ಥಾನಗಳ ಆಸ್ತಿ ಇದೆಯೋ ಅದೇ ರೀತಿ ವಕ್ಫ್ ಆಸ್ತಿಯೂ ಇದೆ. ಹೀಗಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಕ್ಫ್ ಆಸ್ತಿ ವಿಚಾರವಾಗಿ ಇಲ್ಲ ಸಲ್ಲದ ಹೇಳಿಕೆ ನೀಡುವ ಮುನ್ನ ಕಾನೂನು ಅತಿರು, ಅಧ್ಯಯನ ಮಾಡಿ ಮಾತನಾಡಬೇಕೆಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಹೇಳಿದರು.

ವಕ್ಫ್ ಆಸ್ತಿ ಸರ್ಕಾರದ ಸುಪರ್ದಿಗೆ ವಾಪಾಸ್ಸು ಪಡೆದುಕೊಳ್ಳಲು ಪ್ರಧಾನಮಂತ್ರಿಗೆ ಪತ್ರ ಬರೆಯುವುದಾಗಿ ಹೇಳಿರುವ ಬಸನಗೌಡರ ನಡೆ ಖಂಡನೀಯ. ಬಸನಗೌಡರ ತಂದೆ ಜನ್ಮತಾಳುವ ಮುನ್ನ, ಸ್ವಾತಂತ್ರೃ ಪೂರ್ವದಿಂದಲೂ ವಕ್ಫ್ ಕಾನೂನು ಜಾರಿಯಲ್ಲಿದೆ. ವಕ್ಫ್ ಆಸ್ತಿ ಖರೀದಿ ತೆಗೆದುಕೊಂಡಿರುವಂಥದ್ದಲ್ಲ. ಮುಸ್ಲಿಂ ಸಮಾಜದ ವ್ಯಕ್ತಿಗಳು ತಮ್ಮ ಆಸ್ತಿ, ಸ್ವತ್ತನ್ನು ತ್ಯಾಗ ಮಾಡಿ ದೇವರ ಹೆಸರಿಗೆ ಅರ್ಪಿಸಿದ ಆಸ್ತಿಗಳ ರೂಪವೇ ವಕ್ಫ್ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಯತ್ನಾಳರಿಗೆ ಸಂವಿಧಾನದ ಗಂಧ-ಗಾಳಿಯೂ ಗೊತ್ತಿಲ್ಲ, ಓದಿಕೊಂಡವರೂ ಅಲ್ಲ. ಜೆಡಿಎಸ್ ಪಕ್ಷದಲ್ಲಿದ್ದಾಗ ಮುಸ್ಲಿಂರ ಮನೆ ಬಾಗಿಲಿಗೆ ಹೋಗಿ ಮತ ಕೇಳುವಾಗ ಅವರಿಗೆ ಬುದ್ಧಿ ಇರಲಿಲ್ಲವೇ? ಎಂದು ಪ್ರಶ್ನಿಸಿದರು.

ಸಂಘ ಪರಿವಾರವೇ ದೇಶವನ್ನು ವಿಭಜನೆ ಮಾಡಿದೆ, ಮುಸ್ಲಿಂರನ್ನು ಇಲ್ಲಿ ಅಲ್ಪಸಂಖ್ಯಾತರನ್ನಾಗಿಸುವ ಹುನ್ನಾರದಿಂದ ಸಂಘ ಪರಿವಾರವೇ ದೇಶವನ್ನು ಒಡೆಯಿತು. ಅಖಂಡ ಭಾರತವಿದ್ದರೆ ಮುಸ್ಲಿಂರ ಪ್ರಾಬಲ್ಯವೇ ಅಧಿಕವಾಗುತ್ತದೆ ಎನ್ನುವ ಕಾರಣದಿಂದಾಗಿಯೇ ಸಂಘ ಪರಿವಾರ ಭಾರತ ವಿಭಜನೆಗೆ ಕಾರಣವಾಯಿತು ಎಂದರು.

ದಲಿತರಿಗೆ, ಅಲ್ಪಸಂಖ್ಯಾತರಿಗೆ ಮತದಾನ ಹಕ್ಕು ನೀಡಲು ವಿರೋಧಿಸಿದ ಪಕ್ಷದಲ್ಲಿ ಯತ್ನಾಳರು ಇದ್ದಾರೆ, ಸಾವರ್ಕರ್ ಹಾಗೂ ಅವರ ಅನುಯಾಯಿಗಳು ಈ ವಿಚಾರವನ್ನು ಇರಿಸಿದ್ದರು, ದಲಿತರಿಗೆ ಮತದಾನ ಹಕ್ಕು ಬೇಡ ಎಂದು ಪ್ರತಿಪಾದಿಸಿದ್ದರು ಎಂದರು.

ದಕ್ಷ-ಬದ್ಧತೆಯ ರಾಜಕಾರಣಿ ಸಚಿವ ಶಿವಾನಂದ ಪಾಟೀಲರ ಮೇಲೆ ವಿನಾಕಾರಣ ಭ್ರಷ್ಟಾಚಾರ ಆರೋಪ ಹೊರೆಸಿರುವುದು ಖಂಡನೀಯ. ಶಿವಾನಂದ ಪಾಟೀಲರು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರೆ, ಸಚಿವ ಡಾ.ಎಂ.ಬಿ. ಪಾಟೀಲರು ಜಲ ಕ್ರಾಂತಿ ಮಾಡಿದ್ದಾರೆ ಎಂದರು.

ದಲಿತ ಮುಖಂಡ ನಾಗರಾಜ ಲಂಬು ಮಾತನಾಡಿ, ಕಳೆದ ಕೆಲವು ದಿನಗಳ ಹಿಂದೆ ದಲಿತ ಮುಖಂಡರು ನಡೆಸಿದ ಹೋರಾಟ ನಗರ ಶಾಸಕ ಯತ್ನಾಳರ ಪ್ರೇರಿತ ಹೋರಾಟವಾಗಿದೆ. ಅವರ ಕಚೇರಿಯಿಂದಲೇ ಆಪರೇಟ್ ಆಗುತ್ತಿತ್ತು. ಸಮಸ್ಯೆ ಬಗೆ ಹರಿಯವುದು ಯತ್ನಾಳರಿಗೆ ಬೇಕಾಗಿಲ್ಲ, ಈ ಸಮಸ್ಯೆಯನ್ನು ಜೀವಂತವಾಗಿರಿಸುವುದು ಅವರಿಗೆ ಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೆ ಭರವಸೆ ಇರಿಸಿ ಧರಣಿ ಕೈ ಬಿಡಲಿಲ್ಲ, ಆದರೆ ಯತ್ನಾಳರು ಬಂದ ದಿನವೇ ಧರಣಿ ಅವರು ಕೈ ಬಿಟ್ಟಿದ್ದಾರೆ ಎಂದರು.
ಮುಖಂಡರಾದ ಡಾ.ರವಿ ಬಿರಾದಾರ, ಫಯಾಜ್ ಕಲಾದಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net