

ಚಿಕ್ಕಮಗಳೂರು: ಸೈಬರ್ ಜಗತ್ತಿನಲ್ಲಿ ಮುಕ್ತ ಅವಕಾಶ ದೊರಕಿದ ನಂತರ ಶೇ.25 ರಿಂದ 28ರಷ್ಟು ಹೊಸ ರೀತಿಯಲ್ಲಿ ಅಪರಾಧಗಳು ನಡೆಯುತ್ತಿದ್ದು, ಕಾನೂನು ವಿದ್ಯಾರ್ಥಿಗಳು ಅವುಗಳನ್ನು ಭೇದಿಸುವ ಕುರಿತು ತಿಳಿದುಕೊಳ್ಳಬೇಕು ಎಂದು ಎಸ್‍ಪಿ ಎಂ.ಎಚ್.ಅಕ್ಷಯ್ ಸಲಹೆ ನೀಡಿದರು. ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಶಾರದಾ ಕಾನೂನು ಕಾಲೇಜು ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸೈಬರ್ ಅಪರಾಧ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮೊಬೈಲ್ ಸಂದೇಶ ಮೂಲ ಪತ್ತೆ ಸುಲಭ:
ಯಾರೋ ಒಬ್ಬರು ಇನ್ನೊಂದು ಮೊಬೈಲ್‍ಗೆ ಅಶ್ಲೀಲ ಭಾವಚಿತ್ರ ಒಳಗೊಂಡಂತೆ ಸಂದೇಶ ಕಳುಹಿಸಿದಲ್ಲಿ ಆ ಸಂಪರ್ಕ ಸಂಖ್ಯೆ ಆಧರಿಸಿ ಅವು ಯಾವ ವ್ಯಕ್ತಿಯಿಂದ ಬಂದಿದೆ ಎಂದು ಪತ್ತೆ ಹಚ್ಚಿ, ಮೊಬೈಲ್ ವಶಪಡಿಸಿಕೊಂಡು ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳಬಹುದು. ಹೊಸದಾಗಿ ಎಲೆಕ್ಟ್ರಾನಿಕ್ಸ್ ಎವಿಡೆನ್ಸ್ ಆ್ಯಕ್ಟ್, ಮಾಹಿತಿ ತಂತ್ರಜ್ಞಾನ ಕಾಯ್ದೆ ತಿದ್ದುಪಡಿಯಾದ ಬಳಿಕ ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚುವುದು ಸುಲಭವಾಗಿದೆ. ಆದರೆ ಅಪರಾಧಗಳನ್ನು ಹೊಸ ಆಯಾಮದಲ್ಲಿ ನೋಡಬೇಕಿದೆ. ಈ ನಿಟ್ಟಿನಲ್ಲಿ ಸಾಕ್ಷ್ಯಾಧಾರ ಕಾಯ್ದೆ ಉತ್ತಮವಾಗಿದ್ದು, ಇಂದಿಗೂ ಉಪಯುಕ್ತವಾಗಿ ಪ್ರಚಲಿತದಲ್ಲಿದೆ ಎಂದರು.
ತಾಂತ್ರಿಕತೆ ಸದ್ವಿನಿಯೋಗ ಪರಿಜ್ಞಾನ ಬೇಕು:
ಕಂಪ್ಯೂಟರ್, ಆ್ಯಂಡ್ರಾಯ್ಡ್, ವಾಟ್ಸಪ್ - ಹೀಗೆ ತಾಂತ್ರಿಕತೆ ಸಾಕಷ್ಟು ಬೆಳವಣಿಗೆಯಾಗಿದೆ. ಇದನ್ನು ಯಾವುದಕ್ಕೆ ಬಳಸಿಕೊಳ್ಳಬೇಕು ಎನ್ನುವ ಪರಿಜ್ಞಾನ ನಮಗಿರಬೇಕು. 75 ವರ್ಷದ ಅಜ್ಜಿಯೊಬ್ಬರು ತಮ್ಮ ಮಕ್ಕಳ ಜತೆ ವೀಡಿಯೋ ಕರೆ ಮೂಲಕ ಮಾತನಾಡುತ್ತಾರೆ. ಅಲ್ಲದೇ ಇತ್ತೀಚೆಗೆ ಮದುವೆಯಾದ ಮೊಮ್ಮಗಳಿಗೆ ಕರೆ ಮಾಡಿ ಅಡುಗೆಯ ವಿಧಿ ವಿಧಾನಗಳನ್ನು ತಿಳಿಸುತ್ತಿರುವ ನಿದರ್ಶನ ನಮ್ಮ ಮುಂದಿದೆ. ತಾಂತ್ರಿಕತೆ ಬೆಳವಣಿಗೆ, ಬಳಕೆ ಉತ್ತಮ ಬೆಳವಣಿಗೆ. ಆದರೆ ಅದನ್ನು ಉತ್ತಮ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಹೆಚ್ಚುತ್ತಿದೆ ಹಣ ದೋಚುವ ಪ್ರವೃತ್ತಿ:
ತಂತ್ರಜ್ಞಾನವನ್ನು ಬಳಸಿ ತಾತ್ಕಾಲಿಕ ಸಂಪರ್ಕ ಸಂಖ್ಯೆ ಮೂಲಕ ಸಂಪರ್ಕಿಸಿ ಹಣ ದೋಚುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗಿದೆ. ಇಂಥ ಪ್ರಕರಣಗಳಲ್ಲಿ ಕೃತ್ಯದ ಮೂಲ ಸೂತ್ರದಾರರ ಸೂಚನೆ ಮೇರೆಗೆ ಹಲ್ಲೆ ನಡೆಸಿ ಹಣ ದೋಚಬಹುದು. ಹೀಗಿದ್ದಾಗ ಹಲ್ಲೆ ನಡೆಸಿದವರನ್ನು ಪತ್ತೆಹಚ್ಚಿದರೂ ಅವರು ಮೂಲ ಅಪರಾಧಿಗಳಾಗಿರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಮೂಲ ಆರೋಪಿ ಪತ್ತೆಯೇ ಆಗುವುದಿಲ್ಲ. ಆತ ಸಂಪರ್ಕಿಸಲು ಬಳಸಿದ ತಾತ್ಕಾಲಿಕ ಸಂಖ್ಯೆ ಮೂರು ಗಂಟೆ ಮಾತ್ರ ಅಸ್ತಿತ್ವದಲ್ಲಿರುತ್ತದೆ. ಮೂಲ ಅಪರಾಧಿ ಪತ್ತೆಯಾಗದ ಕಾರಣ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದರೂ ಸಾಕ್ಷ್ಯಾಧಾರಗಳ ಕೊರತೆಯಿಂದ ಹಾಗೂ ಆರೋಪ ಪಟ್ಟಿಯಲ್ಲಿನ ಅಂಶಗಳು ಪ್ರಬಲವಾಗಿರದ ಹಿನ್ನೆಲೆಯಲ್ಲಿ ಮೊಕದ್ದಮೆ ಬಿದ್ದು ಹೋಗುತ್ತದೆ. ಈ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳು ಗಣಿತ ಸೂತ್ರದಂತೆ ನಿಖರವಾಗಿ ಅವುಗಳನ್ನು ಪತ್ತೆಹಚ್ಚಲು ಅಧ್ಯಯನ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಜನರು ಎಚ್ಚರಿಕೆ ವಹಿಸಬೇಕು:
ಸಂಪನ್ಮೂಲ ವ್ಯಕ್ತಿ ಸಿಇಎನ್ ಠಾಣೆಯ ಪಿಎಸ್‍ಐ ಎಂ.ಕೆ.ರಮ್ಯಾ ಸೈಬರ್ ಅಪರಾಧದ ಬಗ್ಗೆ ಉಪನ್ಯಾಸ ನೀಡಿ, ಸೈಬರ್ ಅಪರಾಧಗಳ ಬಗೆ ಹಾಗೂ ಜನಸಾಮಾನ್ಯರು ವಹಿಸಬೇಕಾದ ಎಚ್ಚರಿಕೆ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ಕಚೇರಿ ಕಿರಿಯ ಕಾನೂನು ಅಧಿಕಾರಿ ರಾಘವೇಂದ್ರ ರಾಯ್ಕರ್ ಮಾತನಾಡಿ, ತಂತ್ರಜ್ಞಾನವನ್ನು ಬಳಸಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ವಹಿಸಬೇಕಾದ ಎಚ್ಚರಿಕೆ ಕುರಿತು ಮಾಹಿತಿ ನೀಡಿದರು. ಶ್ರೀ ಶಾರದಾ ಕಾನೂನು ಶಿಕ್ಷಣ ಶಾಲೆಯ ಪ್ರಾಚಾರ್ಯೆ ಜಿ.ಭಾಗ್ಯಲಕ್ಷ್ಮಿ ಮಾತನಾಡಿ, ಕಾರ್ಯಾಗಾರದ ಉಪಯುಕ್ತತೆ ಬಗ್ಗೆ ತಿಳಿಸಿ ಕಾನೂನುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ನಿರೀಕ್ಷಕ ಕೆ.ಸತ್ಯನಾರಾಯಣ್, ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆ ಕಾರ್ಯಕ್ರಮದಲ್ಲಿದ್ದರು.