

ತುಮಕೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಅಧ್ಯಕ್ಷರಾಗಿ ಮಾಜಿ ಶಾಸಕ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸತತ ಐದನೇ ಬಾರಿಗೆ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಜಿಪಂ ಸದಸ್ಯ ಜಿ.ಜೆ.ರಾಜಣ್ಣ ಅವಿರೋಧ ಆಯ್ಕೆಯಾಗಿದ್ದಾರೆ.
ಬ್ಯಾಂಕ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಿರ್ದೇಶಕ ಮಂಡಳಿಯ ಎಲ್ಲ 14 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಶನಿವಾರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕೂಡ ಅವಿರೋಧವಾಗಿರುವುದು ವಿಶೇಷ ಎಂದು ನೂತನ ರಾಜಣ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
51 ಹೋಬಳಿಗಳಲ್ಲೂ ಶಾಖೆ: ಮೀಟರ್ ಬಡ್ಡಿಯವರು, ಪಾನ್‌ಬ್ರೋಕರ್‌ಗಳ ಕೈಗೆ ಬಡವರು, ನಿರ್ಗತಿಕರು ಸಿಕ್ಕಿ ನರಳಬಾರದು ಎಂಬ ಉದ್ದೇಶದಿಂದ ಮುಂದಿನ 5 ವರ್ಷಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಡಿಸಿಸಿ ಬ್ಯಾಂಕ್ ಹಣಕಾಸು ನೆರವಿನಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘಗಳ ಸ್ಥಾಪನೆ ಹಾಗೂ 51 ಹೋಬಳಿಗಳಲ್ಲಿಯೂ ಬ್ಯಾಂಕ್ ಶಾಖೆ ತೆರೆಯಬೇಕೆಂಬ ಗುರಿ ಹೊಂದಲಾಗಿದೆ, ಅರ್ಹ ರೈತರಿಗೆ ಸಾಲ ಸಾಲ ಸೌಲಭ್ಯ ಸಿಗುವಂತೆ ಮಾಡುವುದು ನನ್ನ ಮಹಾದಾಸೆಯಾಗಿದೆ ಎಂದು ರಾಜಣ್ಣ ತಿಳಿಸಿದರು.
ಚಿನ್ನದ ಸಾಲ ನೀಡುವ ಸಂಸ್ಥೆಗಳು ಗ್ರಾಹಕರನ್ನು ಸುಲಿಯುವ ಕೆಲಸ ಮಾಡುತ್ತಿವೆ, ಇದನ್ನು ಅರಿತು ನಾವು ಡಿಸಿಸಿ ಬ್ಯಾಂಕ್‌ನಲ್ಲಿ ಗೋಲ್ಡ್ ಲೋನ್ ನೀಡುತ್ತಿದ್ದು, ಗ್ರಾಹಕರು ಹೆಚ್ಚಿದ್ದಾರೆ. ಬ್ಯಾಂಕರ್ಸ್ ಹಾಗೂ ಮೀಟರ್ ಬಡ್ಡಿಯವರಿಗೆ ಕಡಿವಾಣ ಬಿದ್ದಂತಾಗಿದೆ ಎಂದರು.
ಬ್ಯಾಂಕಿನ ನೂತನ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕರಾದ ಎಸ್.ಲಕ್ಷ್ಮೀನಾರಾಯಣ್, ಎಸ್.ಎ.ರಾಜಕುಮಾರ್, ಬಿ.ನಾಗೇಶ್‌ಬಾಬು, ಜಿ.ಎಸ್.ರವಿ, ಆರ್.ರಾಜೇಂದ್ರ, ಬಿ.ಶಿವಣ್ಣ, ಎಚ್.ಸಿ.ಪ್ರಭಾಕರ್, ಎಂ.ಸಿದ್ದಲಿಂಗಪ್ಪ, ಸಹಕಾರ ಮಹಾಮಂಡಳದ ರಾಜ್ಯಾಧ್ಯಕ್ಷ ಎನ್.ಗಂಗಣ್ಣ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಪಾಟೀಲ್, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರಾಮಕೃಷ್ಣನಾಯ್ಕ ಇದ್ದರು.
ಉಚ್ಚಾಟನೆ ವಾಪಸ್ : ಮಧುಗಿರಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹಾಗೂ ಮಧುಗಿರಿ ಪಟ್ಟಣ ಘಟಕದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದ ಆದೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಪಸ್ ಪಡೆದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಈ ಇಬ್ಬರು ಕೆಲಸ ಮಾಡಿದ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪಕ್ಕಾಗಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಕೆ.ಎನ್.ರಾಜಣ್ಣರ ಬೆಂಬಲಿಗರಾದ ಈ ಇಬ್ಬರ ಉಚ್ಚಾಟನೆಯ ಆದೇಶವನ್ನು ಶಿರಾ ಉಪಚುನಾವಣೆಯ ಹೊಸ್ತಿಲಿನಲ್ಲಿ ವಾಪಸ್ ಪಡೆಯಲಾಗಿದೆ.
ಕೈ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರಲ್ಲ. ಶಿರಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾನೂ ಟವೆಲ್ ಹಾಕಿದ್ದೆ. ಆದರೆ ಟವೆಲ್ ಅನ್ನು ಪಕ್ಕಕ್ಕೆ ಸರಿಸಿದ್ದಾರೆ. ನಾನು ಪಕ್ಷ ಹೇಳಿದವರ ಪರವಾಗಿ ಕೆಲಸ ಮಾಡುವೆ. ಎಲ್ಲರೂ ಸೇರಿ ಕಾಂಗ್ರೆಸ್ ಗೆಲುವಿಗೆ ಪ್ರಯತ್ನಿಸುತ್ತೇವೆ. ನಮ್ಮ ನಾಯಕರಾದ ಸಿದ್ದರಾಮಯ್ಯರ ನಿಲುವಿಗೆ ಬದ್ಧ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ. ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿನಲ್ಲಿ ನನ್ನ ಪಾತ್ರ ಇರುವುದು ನಿಜ ಎಂದು ರಾಜಣ್ಣ ಸ್ಪಷ್ಟಪಡಿಸಿದರು.
15 ದಿನಗಳಿಗೊಮ್ಮೆ ಡಿಸಿಸಿ ಬ್ಯಾಂಕಿನ ವ್ಯವಹಾರ ಕುರಿತು ಆರ್‌ಬಿಐಗೆ ವರದಿ ನೀಡಲಾಗುತ್ತಿದೆ. ಒಂದೆರಡು ಸಹಕಾರಿ ಬ್ಯಾಂಕುಗಳು ಅವ್ಯವಹಾರದಲ್ಲಿ ತೊಡಗಿವೆ ಎಂದ ಮಾತ್ರಕ್ಕೆ ಇಡೀ ಕ್ಷೇತ್ರವನ್ನು ಅನುಮಾನದಿಂದ ನೋಡುವುದು ತರವಲ್ಲ, ಸಹಕಾರಿ ಕ್ಷೇತ್ರವನ್ನು ಆರ್‌ಬಿಐ ನೇರ ನಿಗಾವಣೆಗೆ ತರಬೇಕೆಂಬುದು ಸರಿಯಲ್ಲ. ಕೆ.ಎನ್.ರಾಜಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷ