ಮಧುಗಿರಿಯಿಂದ ಕೆ.ಎನ್.ರಾಜಣ್ಣ ಸ್ಪರ್ಧೆ ಖಚಿತ ; ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ವಿಶ್ವಾಸ

30 TMK Madhu
Published on

ಮಧುಗಿರಿ: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎನ್.ರಾಜಣ್ಣ ಸ್ಪರ್ಧಿಸುವುದು ಖಚಿತ. ಜತೆಗೆ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಸಚಿವರಾಗುವುದೂ ನಿಶ್ಚಿತ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಮರುವೇಕೆರೆ ಗ್ರಾಮದಲ್ಲಿರುವ ಶ್ರೀ ಮಲೆ ರಂಗನಾಥ ಸ್ವಾಮಿ ದೇಗುಲದ ಆವರಣದಲ್ಲಿ ಸೋಮವಾರ ಸಂಜೆ ತಾಲೂಕು ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಹಾಗೂ ಪ್ರತಿಜ್ಞಾವಿಧಿ ನೇರ ಪ್ರಸಾರ ಕಾರ್ಯಕ್ರಮ ಕುರಿತ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಡಿಸಿಸಿ ಬ್ಯಾಂಕ್‌ನಿಂದ ಜಿಲ್ಲೆಗೆ ಕೆಸಿಸಿ ಸಾಲ 300 ಕೋಟಿ ರೂಪಾಯಿ ನೀಡಿದ್ದು, ಮಧುಗಿರಿ ತಾಲೂಕಿನಲ್ಲಿ 100 ಕೋಟಿ ರೂಪಾಯಿವರೆಗೂ ಸಾಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರೈತರಿಗೆ ಅವಶ್ಯಕತೆಗೆ ಅನುಗುಣವಾಗಿ ಸಾಲ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು. ಕೆಪಿಸಿಸಿ ವೀಕ್ಷಕ ಅಶೋಕ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಅಭಿವೃದ್ಧಿ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದಿಲ್ಲ, ಬಿಜೆಪಿಯವರು ಅಭಿವೃದ್ಧಿ ಮಾಡದೇ ಪ್ರಚಾರ ಪಡೆಯುವಲ್ಲಿ ಮುಂದಿದ್ದಾರೆ ಎಂದರು.

ವಿಎಸ್‌ಎಸ್‌ಎನ್ ಅಧ್ಯಕ್ಷ ಫಾಜೀಲ್, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಮುಖಂಡ ಡಿ.ಎಚ್.ನಾಗರಾಜು, ಗಂಜಲಗುಂಟೆ ಗ್ರಾಪಂ ಮಾಜಿ ಅಧ್ಯಕ್ಷ ಮಧುಸೂದನ್, ಪಾವಗಡ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸೀತಾರಾಮ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಾಮಕೃಷ್ಣ, ವಿಎಸ್ಸೆಸ್ಸೆನ್ ಕಾರ್ಯದರ್ಶಿ ಸುರೇಶ್ ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net