

ಕಂಪ್ಲಿ: ಪಟ್ಟಣದ ಮಾರುತಿ ನಗರದ ಸ.ನಂ. 619ರಲ್ಲಿನ ಪುರಾತನ ಆಂಜನೇಯ ದೇವಸ್ಥಾನದ ಸ್ಥಳ, ಬಾವಿ ಹಾಗೂ ತುಳಸಿಕಟ್ಟೆ ಅತಿಕ್ರಮಿಸಲಾಗಿದೆ ಎಂಬ ದೂರಿನನ್ವಯ ಹಿಂದು ಧಾರ್ಮಿಕ ದತ್ತಿಗಳ ಇಲಾಖೆ, ಪುರಸಭೆ, ಕಂದಾಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹಿಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಸವಿತಾ ಮಾತನಾಡಿ, ಸ.ನಂ. 619ರಲ್ಲಿನ ದೇವಸ್ಥಾನಕ್ಕೆ ಸೇರಿದ 74 ಸೆಂಟ್ಸ್ ಭೂಮಿ ಒತ್ತುವರಿಯಾಗಿದೆ ಎಂದು ಎಚ್.ಸಂಜೀವ ಎನ್ನುವವರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಲಾಗಿದೆ.
ದೂರುದಾರರು ಮತ್ತು ಪಟ್ಟಾದಾರರ ದಾಖಲೆಗಳನ್ನು ಸಂಗ್ರಹಿಸಿದ್ದು, ಮುಂದಿನ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ದೂರುದಾರ ಎಚ್.ಸಂಜೀವ ಮಾತನಾಡಿ, ಸ.ನಂ. 619ರ 85 ಸೆಂಟ್ಸ್ ಭೂಮಿ ಪುರಾತನ ಆಂಜನೇಯ ದೇವಸ್ಥಾನ ವ್ಯಾಪ್ತಿಯ ಸರ್ಕಾರಿ ಭೂಮಿಯಾಗಿದೆ. ಇದನ್ನು ಅನ್ಯರು ಅತಿಕ್ರಮಿಸಿದ್ದಾರೆ. ಈ ಭೂಮಿಯನ್ನು ಸಮೀಕ್ಷೆ ಮಾಡಿ ಹದ್ದುಬಸ್ತುಗೊಳಿಸಿ, ಆಂಜನೇಯ ದೇವಸ್ಥಾನದ ಹೆಸರಿನಲ್ಲಿ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.
ನಿವಾಸಿಗಳಾದ ಬಿ.ಸಿದ್ದಪ್ಪ, ನಂದ್ಯೆಪ್ಪ, ರಾಮಣ್ಣ ಮಾತನಾಡಿ, ಸ.ನಂ. 619ರ ಭೂಮಿ ಪಟ್ಟಾಭೂಮಿಯಾಗಿದ್ದು ಇದಕ್ಕೆ ತಕ್ಕ ದಾಖಲೆಗಳಿವೆ ಎಂದರು. ಸರ್ವೇಯರ್ ಅನಿಲ್ ಕುಮಾರ್, ವಿಎ ರಮೇಶ್, ಪುರಸಭೆ ಆರ್‌ಒ ಪ್ರಶಾಂತ ಚಿತ್ರಗಾರ್, ಆರ್‌ಐ ಜಯಲಕ್ಷ್ಮೀ, ವಿಷಯನಿರ್ವಾಹಕ ಆಂಜನೇಯ, ಕರವಸೂಲಿಗಾರ ಆನಂದ ಗಿರಿಜಾಲಿ ಇತರರಿದ್ದರು.