ಮೈಸೂರು: ಅತ್ಯುತ್ತಮ ಸಾರ್ವಜನಿಕ ಆಸ್ಪತ್ರೆ ಎಂದು ಹೆಸರು ಪಡೆದಿದ್ದ ಕೃಷ್ಣ ರಾಜೇಂದ್ರ ಆಸ್ಪತ್ರೆ (ಕೆ.ಆರ್.ಆಸ್ಪತ್ರೆ) ದಿನೇ ದಿನೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದು, ರೋಗಿಗಳಿಗೆ ಸೂಕ್ತ ವ್ಯವಸ್ಥೆ ಇಲ್ಲ ಎನ್ನುವುದಕ್ಕೆ ಆಸ್ಪತ್ರೆ ಆವರಣದಲ್ಲಿ ಚಳಿಯಿಂದ ವ್ಯಕ್ತಿ ಮೃತಪಟ್ಟಿರುವುದೇ ಸಾಕ್ಷಿ ಎಂದು ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ದೂರಿದ್ದಾರೆ.
ರೋಗಿಗಳ ಜತೆಗೆ ಬಂದವರಿಗೆ ಕನಿಷ್ಠ ಸೌಜನ್ಯ ಮತ್ತು ಮಾನವೀಯತೆ ತೋರುವಲ್ಲಿ ಸಿಬ್ಬಂದಿ ಕಡೆಗಣಿಸಿದ್ದಾರೆ. ಕೇವಲ ಹಣ ನೀಡಿದವರಿಗೆ ಸೌಲಭ್ಯ ಸಿಗುತ್ತದೆಯೇ ಹೊರತು ಬಡವರು ಬೀದಿ ನಾಯಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಿದ್ದಾರೆ. ಈಗಾಗಲೇ ನೂರಾರು ನಿರಾಶ್ರಿತರು ಚಳಿ ತಾಳಲಾರದೆ ಸಾವನ್ನಪ್ಪಿದ್ದಾರೆ, ಅದರಂತೆಯೇ ಇಂದು ಒಬ್ಬ ವ್ಯಕ್ತಿಯು ಚಳಿ ತಾಳದೇ ಸಾವನ್ನಪ್ಪಿದ ಘಟನೆ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ ಎಂದು ಹೇಳಿಕೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕೂಡಲೇ ಇದಕ್ಕೆ ಕಾರಣರಾದ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ ಬಡ ರೋಗಿಗಳಿಗೆ, ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಸರ್ಕಾರ ಮುಂದಾಗಬೇಕು. ಚಳಿಗಾಲದಲ್ಲಿ ಹೊದಿಕೆ ವಿತರಣೆ ಮಾಡಲು ಈಗಾಗಲೇ ಸಂಘಸಂಸ್ಥೆಗಳು ಮುಂದಾಗಿ ಈ ಕೆಲಸ ಮಾಡುತ್ತಿದ್ದರೂ ನಗರಪಾಲಿಕೆ ಕಣ್ಮುಚ್ಚಿ ಕುಳಿತಿದೆ. ನಿರಾಶ್ರಿತರ ಅಭಿವೃದ್ಧಿ ಮಂಡಳಿಯವರು ನಿದ್ರೆಯಲ್ಲಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.