

ಉಡುಪಿ: ಕೇಂದ್ರ ಸರ್ಕಾರ ಪ್ರತ್ಯೇಕ ಸಹಕಾರಿ ಇಲಾಖೆ ರಚಿಸಿದ ಬಳಿಕ ಸಹಕಾರಿ ರಂಗಕ್ಕೆ ಹೆಚ್ಚಿನ ಬಲ ಲಭಿಸಿದೆ. ನೇರ ಅನುದಾನ ಲಭ್ಯವಾಗುತ್ತಿದೆ. ಮುಖ್ಯವಾಗಿ ಆರ್ಥಿಕ ಶಿಸ್ತು ಬಂದಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಭಾನುವಾರ ಉಪ್ಪೂರಿನಲ್ಲಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಡುಪಿ ಡೈರಿ ಆಡಳಿತ ಕಚೇರಿ ಶಂಕುಸ್ಥಾಪನೆ ಹಾಗೂ ನೂತನ ಉಪಾಹಾರ ಗೃಹ ಉದ್ಘಾಟಿಸಿ ಅವರು ಮಾತನಾಡಿದರು.
ಅವಿಭಜಿತ ದಕ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ವಿಶೇಷ ಸಾಧನೆ ಮಾಡುತ್ತಿದೆ. ಪ್ರಾಮಾಣಿಕ ಸೇವೆ ಮತ್ತು ಆರೋಗ್ಯಪೂರ್ಣ ಸ್ಪರ್ಧೆಯಿಂದ ಲಾಭದಲ್ಲಿ ನಡೆಯುತ್ತಿವೆ. ದ.ಕ. ಹಾಲು ಒಕ್ಕೂಟ ರಾಜ್ಯದಲ್ಲಿ 4ನೇ ಸ್ಥಾನದಲ್ಲಿದ್ದು, 1 ಸಾವಿರ ಮಂದಿಗೆ ನೇರ ಉದ್ಯೋಗ ಹಾಗೂ ಅನೇಕ ಕುಟುಂಬಗಳಿಗೆ ಹಾಲಿನ ಬೂತ್ಗಳ ಮೂಲಕ ಜೀವನೋಪಾಯವನ್ನು ಕಲ್ಪಿಸಿದೆ. ಮಣಿಪಾಲದಲ್ಲಿ ಸಂಸ್ಥೆಗೆ ಸಂಬಂಧಿಸಿದ 2 ಎಕ್ರೆ ಜಾಗವಿದ್ದು, ಇಲ್ಲಿ ಐಸ್ಕ್ರೀಂ ಘಟಕವನ್ನು ತೆರೆಯುವ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡಲು ಕ್ರಮವಹಿಸಬೇಕು. ಕೇಂದ್ರ ಸರ್ಕಾರದಿಂದ ಇದಕ್ಕೆ ಬೇಕಾದ ಸಹಾಯ ದೊರಕಿಸಿಕೊಡಲಾಗುವುದು ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಾನು ಸ್ವತಃ ಹೈನುಗಾರಿಕೆ ನಡೆಸುತ್ತಿದ್ದು, ಇದರಿಂದ ರೈತರ ಬವಣೆ ಅರ್ಥವಾಗಿದೆ. ಇತ್ತೀಚೆಗೆ ಗೋ ಸಾಕಾಣಿಕೆ ಕಡಿಮೆಯಾಗುತ್ತಿದೆ. ಹೀಗಾಗಿ ಹೈಗಾರಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಲಿಗೆ 2 ರಿಂದ 3 ರೂ. ಹೆಚ್ಚಳವಾಗಬೇಕು. ಅನೇಕ ಹೆಣ್ಮಕ್ಕಳು ದನದ ಹಾಲು ಮಾರಾಟ ಮಾಡಿ ಜೀವನ ರೂಪಿಸಿಕೊಂಡಿದ್ದಾರೆ. ನಂದಿನಿಯಿಂದಾಗಿ ಅವಿಭಜಿತ ದ.ಕ. ಜಿಲ್ಲೆಯ ಆರ್ಥಿಕತೆ ವೃದ್ಧಿಯಾಗಿದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ವಿವೇಕ ಡಿ. ಪ್ರಸ್ತಾವಿಕವಾಗಿ ಮಾತನಾಡಿ, ಉಡುಪಿ ಘಟಕದಲ್ಲಿ 133247 ಲೀ ಹಾಲು ಸಂಗ್ರಹವಾಗುತ್ತಿದ್ದು, 341 ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ 25207 ಸಕ್ರಿಯ ಸದಸ್ಯರಿದ್ದಾರೆ. ಘಟಕದಲ್ಲಿ ನೌಕರರ ಊಟ ಉಪಹಾರಕ್ಕೆ ಸುಸಜ್ಜಿತ ಉಪಹಾರಗೃಹದ ಅವಶ್ಯಕತೆ ಇದ್ದುದರಿಂದ ಸುಮಾರು ೫೦೦೦ ಚದರಅಡಿ ವಿಸ್ತೀರ್ಣದ ಕಟ್ಟಡವನ್ನು ಒಟ್ಟು ರೂ. ೧.೨೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುತ್ತದೆ. ಅದರಲ್ಲಿ ನೆಲ ಅಂತಸ್ತಿನಲ್ಲಿ ಉಪಾಹಾರ ಗೃಹ ಮತ್ತು ಮೊದಲ ಅಂತಸ್ತಿನಲ್ಲಿ ಅವಶ್ಯಕತೆಗೆ ತಕ್ಕಂತೆ ವಿವಿಧ ತರಬೇತಿ ಕಾರ್ಯಕ್ರಮ ನಡೆಸಲು ಅನುಕೂಲವಾಗುವಂತೆ ತರಬೇತಿ ಕೇಂದ್ರಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ. ಸುಮಾರು ೨೦,೦೦೦ ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ಅಂದಾಜು ರೂ. ೪.೧೦ ಕೋಟಿ ರೂ. ವೆಚ್ಚದಲ್ಲಿ ಹೊಸ ಆಡಳಿತ ಕಚೇರಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ರಘುಪತಿ ಭಟ್, ಉಪ್ಪೂರುಗ್ರಾಪಂ ಅಧ್ಯಕ್ಷೆ ಗಾಯತ್ರಿ, ಒಕ್ಕೂಟ ನಿರ್ದೇಶಕರಾದ ರವಿರಾಜ ಹೆಗ್ಡೆ, ಕಾಪು ದಿವಾಕರ್ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ , ನರಸಿಂಹ ಕಾಮತ್ ಸವಣೂರು, ಬಿ.ಸುಧಾಕರ ರೈ, ಸುಧಾಕರ ಶೆಟ್ಟಿ, ಸವಿತಾ ಶೆಟ್ಟಿ, ಸ್ಮಿತಾ ಶೆಟ್ಟಿ, ಸದಾಶಿವ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಉಪನಿಬಂಧಕ ಡಾ. ಅರುಣಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.