

ವಿಕ್ರಮ ನಾಡಿಗೇರ ಧಾರವಾಡ
ಧಾರವಾಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟ (ಕೆಎಂಎಫ್)ದ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯಥಿರ್ಗಳೇ ಮೇಲುಗೈ ಸಾಧಿಸಿದ್ದು, ಈ ಬಾರಿಯೂ ಬಿಜೆಪಿ ಕೆಎಂಎಫ್ ಚುಕ್ಕಾಣಿ ಹಿಡಿಯುವುದು ಬಹುತೇಕ ನಿಶ್ಚಿತ ಎಂಬಂತಾಗಿದೆ.
ಕೆಎಂಎಫ್ನಿಂದ ಹಾವೇರಿ ಜಿಲ್ಲೆ ಬೇರ್ಪಟ್ಟ ಬಳಿಕ ಧಾರವಾಡ, ಉತ್ತರ ಕನ್ನಡ, ಗದಗ ಜಿಲ್ಲಾ ವ್ಯಾಪ್ತಿಯ ಹಾಲು ಒಕ್ಕೂಟದ ಒಟ್ಟು 9 ನಿರ್ದೇಶಕ ಸ್ಥಾನಕ್ಕೆ ಒಬ್ಬರು (ಗದಗ ಮತ್ತು ನರಗುಂದ ತಾಲೂಕಿನಿಂದ ಹನುಮಂತಗೌಡ ಹಿರೇಗೌಡರ) ಅವಿರೋಧ ಆಯ್ಕೆಯಾಗಿದ್ದರೆ, ಉಳಿದ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿದೆ. ನಿರ್ದೇಶಕರ ಆಯ್ಕೆಯಾದ 15 ದಿನಗಳಲ್ಲಿ ಅಧ್ಯಕ್ಷರ ಆಯ್ಕೆ ಮಾಡುವ ನಿಯಮದ ಹಿನ್ನೆಲೆಯಲ್ಲಿ ಅಧ್ಯಕ್ಷ ಗಾದಿಗೆ ಏರಲು ಈಗಾಗಲೇ ಕಸರತ್ತು ಶುರುವಾಗಿದೆ.
ಪ್ರಸಕ್ತ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ಶಂಕರ ಮುಗದ ಅವರು ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರನ್ನೊಳಗೊಂಡಂತೆ ಇನ್ನೂ ಕೆಲವರು ಆಕಾಂಕ್ಷಿ ಗಳಾಗಿದ್ದಾರೆ.
ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಧಾರವಾಡದಿಂದ ಶಂಕರ ಮುಗದ, ಕಲಟಗಿಯ ಗೀತಾ ಮರಲಿಂಗಣ್ಣವರ, ಕುಂದಗೋಳ, ಹುಬ್ಬಳ್ಳಿಯಿಂದ ಸುರೇಶ ಬಣವಿ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರದಿಂದ ಲಿಂಗರಾಜಗೌಡ ಪಾಟೀಲ, ಶಿರಸಿಯ ಸುರೇಶ್ಚಂದ್ರ ಹೆಗಡೆ, ಯಲ್ಲಾಪುರದಿಂದ ಶಂಕರ ಹೆಗಡೆ, ಸಿದ್ದಾಪುರ, ಕುಮಟಾದಿಂದ ಪರಶುರಾಮ ನಾಯ್ಕ ಆಯ್ಕೆಯಾಗಿದ್ದಾರೆ. ಇನ್ನು ಕಾಂಗ್ರೆಸ್ ಬೆಂಬಲಿತರಾಗಿ ರೋಣದಿಂದ ನೀಲಕಂಠ ಅಸೂಟಿ, ಗದಗನಿಂದ ಹನುಮಂತಗೌಡ ಹಿರೇಗೌಡರ ಆಯ್ಕೆಯಾಗಿದ್ದರೆ.
9 ಜನ ನಿರ್ದೇಶಕರ ಜತೆಗೆ ಸಹಕಾರ ಸಂಗಳ ಸಂಯುಕ್ತ ನಿಬಂಧಕರು, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕರು, ಕೆಎಂಎಫ್ ಬೆಂಗಳೂರಿನ ಪ್ರತಿನಿಧಿ ಹಾಗೂ ಸರ್ಕಾರದಿಂದ ನಿರ್ದೇಶನಗೊಂಡ ಒಬ್ಬರು ಸೇರಿ ಒಟ್ಟು 13 ಜನರು ಅಧ್ಯಕ್ಷರ ಆಯ್ಕೆಗೆ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಈ ಪೈಕಿ 7 ಮತಗಳನ್ನು ಪಡೆಯುವವರು ಅಧ್ಯಕ್ಷ ಗಾದಿ ಏರಲಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬೇಕಿರುವ ಮತಗಳ ಸಂಖ್ಯೆಯಷ್ಟು ಬಿಜೆಪಿ ಬೆಂಬಲಿತ ನಿರ್ದೇಶಕರು ಆಯ್ಕೆಯಾದ ಕಾರಣ ಬಿಜೆಪಿ ಕೆಎಂಎಫ್ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾದಂತಾಗಿದೆ. ಆದರೆ ಈಗಾಗಲೇ ಅಧ್ಯಕ್ಷರಾಗಿ ಅಧಿಕಾರ ನಡೆಸಿದ ಅನುಭವ ಹೊಂದಿರುವ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ನೀಲಕಂಠ ಅಸೂಟಿ ಸಹ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸದೆ ಇರಲಾರರು. ಆದರೆ ಸರಳ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ. ಹೀಗಾಗಿ ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.