

ಕೊಟ್ಟೂರು: ಮನು ಸಂಸ್ಕೃತಿ ಅವರು ವಿರೋಧ ಮಾಡಿದ್ದರಿಂದ ಆರು ತಿಂಗಳ ನಂತರ ರಾಯಣ್ಣನ ಪ್ರತಿಮೆ ಲೋಕಾರ್ಪಣೆ ಮಾಡಲಾಯಿತು ಎಂದು ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ ಹೇಳಿದರು.
ತಾಲೂಕಿನ ಬೋರನಹಳ್ಳಿ ಗ್ರಾಮದಲ್ಲಿ ಮಂಗಳವಾರ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು.
ಹಲವು ಅಡೆತಡೆಗಳ ನಡುವೆಯೂ ಪ್ರತಿಮೆ ಅನಾವರಣಗೊಳಿಸಲಾಗಿದೆ. ಮಸಾರೆ ನೆಲ್ಕುದ್ರಿಯಲ್ಲಿಯೂ ರಾಯಣ್ಣನ ಪ್ರತಿಮೆಯನ್ನು ಶೀಘ್ರದಲ್ಲಿಯೇ ಮರುಪ್ರತಿಷ್ಠಾನೆ ಮಾಡಲಾಗುವುದು ಎಂದರು.
ವಿಧಾನಸಭೆಯ ಚುನಾವಣೆಯಲ್ಲಿ ಹಾಲುಮತ ಸಮಾಜಕ್ಕೆ ನೀಡಿರುವ ಭರವಸೆಯಂತೆ ಕೊಟ್ಟೂರು ತಾಲೂಕಿನ ರಾಂಪುರ, ಹರಾಳು, ಕೆ.ಅಯ್ಯನಹಳ್ಳಿ ಗ್ರಾಮದಲ್ಲಿಯೂ ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳನ್ನು ಸ್ಥಾಪನೆ ಮಾಡಲಾಗುವುದು ಭರವಸೆ ನೀಡಿದರು.
ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಶಾಸಕ ಸ್ಥಾನಕ್ಕಿಂತಲೂ ದೊಡ್ಡದಾದ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ನನ್ನ ತಂದೆ ಸಮಾನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಾದ ಸಂತೋಷಲಾಡ್, ಜಮೀರ ಅಹ್ಮದ್ ಖಾನ್, ರಾಜಣ್ಣ, ವೆಂಕಟೇಶ ಇತರರು ಸೇರಿ ದೊರಕಿಸಿಕೊಡುವ ಮೂಲಕ ರಾಜಕೀಯ ಶಕ್ತಿ ತುಂಬಿದ್ದಾರೆ ಎಂದರು.
ಸಾಕಷ್ಟೂ ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನಗೊಳಿಸಿದರೂ ಜನರು ರಾಜಕೀಯ ವಿರೋಧಿಗಳ ಕಣ್ಣೀರಿಗೆ ಕರಗಿ ಸೋಲಿಸಿದರು. ಈಗ ಜನರೇ ಕಣ್ಣೀರು ಸುರಿಸುತ್ತಿದ್ದಾರೆ. ಈಗಿನ ಶಾಸಕರಿಗೆ ಪ್ರತಿ ಹಳ್ಳಿಯಲ್ಲಿಯೂ ನಾನು ಮಾಡಿಸಿರುವ ಸಿಸಿ ರಸ್ತೆಯ ಕಸಗುಡಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಇದಕ್ಕೂ ಮುನ್ನ ಬೈಕ್ ರ‌್ಯಾಲಿ ಮೂಲಕ ಭೀಮನಾಯ್ಕ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಸರ್ಕಾರಿ ಪ.ಪೂ. ಕಾಲೇಜ್ ಉಪನ್ಯಾಸಕ ಡಿ. ಅಂಜಿನಪ್ಪ ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ವೇದಿಕೆ ಸಾನಿಧ್ಯವಹಿಸಿದ್ದ ಭೂತ ಬುಜಂಗಮಠದ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾಂಗ್ರೆಸ್ ಮುಖಂಡರಾದ ಕುರಿ ಶಿವಮೂರ್ತಿ, ರಾಂಪುರ ಭರಮಪ್ಪ, ದಾರುಕೇಶ, ಕಾವಲಿ ಹನುಮಂತಪ್ಪ, ಮರಿ ರಾಮಣ್ಣ, ಎ. ನಂಜಪ್ಪ, ಅಡಕೆ ಮಂಜುನಾಥ್, ಮೈಲಾರಪ್ಪ, ದೊಡ್ಡರಾಮಣ್ಣ, ಕೊಟ್ರೇಶಪ್ಪ, ಮಲ್ಲಿಕಾರ್ಜುನ ಗೂಳಿ, ತೋಟದ ರಾಮಣ, ಮೂಗಪ್ಪ, ನಾಗರಾಜ್, ಶಶಿಕುಮಾರ್ ಇನ್ನಿತರರಿದ್ದರು.