

ಬೆಂಗಳೂರು: ಆಂಧ್ರ ಪ್ರದೇಶ ಸರ್ಕಾರ ಅಲ್ಲಿನ ಅಂಗನವಾಡಿ ಮಕ್ಕಳಿಗೆ ನಂದಿನಿ ಹಾಲು ಕೊಡಲು ನಿರ್ಧರಿಸಿದ್ದು, ಪ್ರತಿ ತಿಂಗಳು 55 ಲಕ್ಷ ಲೀಟರ್ ಹಾಲು ಖರೀದಿಸಲು ಕೆಎಂಎಫ್ ಜತೆ ಒಪ್ಪಂದ ಮಾಡಿಕೊಂಡಿದೆ.
ಆಂಧ್ರ ಸಿಎಂ ಜಗನ್ವೋಹನ್ ರೆಡ್ಡಿ ಹಾಲು ಖರೀದಿಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೆಎಂಎಫ್ ಜತೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡಿದೆ.
ಮಾ.1ರಿಂದ ಆಂಧ್ರಕ್ಕೆ ಹಾಲು ಸರಬರಾಜು ಆಗಲಿದ್ದು, ಇದರಿಂದ ಉತ್ತಮ ವಹಿವಾಟು ನಡೆಯಲಿದೆ. ಫ್ಲೆಸ್ಲಿ ಪ್ಯಾಕ್ ಮತ್ತು ಟೆಟ್ರಾ ಪ್ಯಾಕ್ಗಳಲ್ಲಿ ಹಾಲು ಸರಬರಾಜು ಮಾಡಲಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ನಂದಿನಿ ಹಾಲು ಖರೀದಿಗೆ ತೆಲಂಗಾಣ ಮತ್ತು ಕೇರಳ ಸರ್ಕಾರಗಳೂ ಆಸಕ್ತಿ ತೋರಿಸಿದ್ದು, ಸದ್ಯದಲ್ಲೇ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಇನ್ಮುಂದೆ ರಾಜ್ಯ ಸರ್ಕಾರಗಳ ಜತೆಗೆ ವಹಿವಾಟು ನಡೆಸಲು ಉದ್ದೇಶಿಸಿದ್ದು, ಬೇರೆ ಬೇರೆ ರಾಜ್ಯಗಳ ಜತೆಗೂ ಮಾತುಕತೆ ನಡೆಸಲಾಗುತ್ತಿದೆ ಎಂದರು.