ಹೈನುಗಾರರ ಸಮಸ್ಯೆ ಪರಿಹಾರಕ್ಕೆ ರಾಜ್ಯಕ್ಕೆ ಮಾದರಿ ಯೋಜನೆ; ಮಂಗಳೂರು ಡೈರಿ ಉಗ್ರಾಣ ಶಂಕುಸ್ಥಾಪನೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಸಲಹೆ

1
ಮಂಗಳೂರು ಕುಲಶೇಖರದ ಡೈರಿ ಆವರಣದಲ್ಲಿ ಬುಧವಾರ ದಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಡೈರಿ ಉಗ್ರಾಣಕ್ಕೆ ಶಂಕುಸ್ಥಾಪನೆ ಮತ್ತು ವಸತಿ ಸಮುಚ್ಛಯದ ಉದ್ಘಾಟನೆ ಸಮಾರಂಭವನ್ನು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌ಉದ್ಘಾಟಿಸಿದರು. ದಕ ಸಂಸಸದರು, ಶಾಸಕ ಡಿ.ವೇದವ್ಯಾಸ ಕಾಮತ್, ದಕ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್ ಕೆ., ಮಂಜುನಾಥ ಭಂಡಾರಿ, ಮಹಾನಗರ ಪಾಲಿಕೆ ಸದಸ್ಯ ಭಾಸ್ಕರ್ ಕೆ. ಮುಂತಾದವರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಪ್ರಸ್ತುತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಹಾಲಿನ ಕೊರತೆ ಎದುರಿಸುತ್ತಿದೆ. ಆದ್ದರಿಂದ ಕೃಷಿ, ಪಶುಸಂಗೋಪನೆ, ಸಹಕಾರ ಇಲಾಖೆ, ಕೆಎಂಎಫ್ ಅಧಿಕಾರಿಗಳು ಹಾಗೂ ಹೈನುಗಾರ ಮುಖಂಡರು ಜತೆಯಾಗಿ ಸಮಾಲೋಚನೆ ನಡೆಸಿ ಹೈನುಗಾರರು ಎದುರಿಸುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯಕ್ಕೆ ಮಾದರಿ ಯೋಜನೆಯೊಂದು ರೂಪಿಸುವಂತೆ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ.
ಮಂಗಳೂರು ಕುಲಶೇಖರದ ಡೈರಿ ಆವರಣದಲ್ಲಿ ಬುಧವಾರ ದಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಡೈರಿ ಉಗ್ರಾಣಕ್ಕೆ ಶಂಕುಸ್ಥಾಪನೆ ಮತ್ತು ವಸತಿ ಸಮುಚ್ಛಯದ ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಪ್ರೋತ್ಸಾಹಧನ ಒದಗಿಸುವುದರಿಂದ ಹೈನುಗಾರರ ಸಮಸ್ಯೆ ಬಗೆಹರಿಯದು. ಹೈನುಗಾರರ ದೈನಂದಿನ ನಿರ್ವಹಣ ಹೆಚ್ಚುತ್ತಿದೆ. ಪಶುಗಳ ಆಹಾರ ಪೂರೈಕೆ, ವೈದ್ಯಕೀಯ ಉಪಚಾರಕ್ಕೆ ಗರಿಷ್ಟ ವೆಚ್ಚ ಬೀಳುತ್ತಿದೆ. ಹೈನುಗಾರರಿಗೆ ಕಡಿಮೆ ವೆಚ್ಚದಲ್ಲಿ ಸಾಕಷ್ಟು ಮೇವು ಪೂರೈಕೆ ಮತ್ತು ಇತರ ನಿರ್ವಹಣ ವೆಚ್ಚ ಕಡಿತಗೊಳಿಸಲು ಪರಿಹಾರೋಪಾಯ ಕಂಡುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಅಗತ್ಯ ಬೆಂಬಲ ಪಡೆಯಲು ನೆರವಾಗುವುದಾಗಿ ಅವರು ಭರವಸೆ ನೀಡಿದರು.
ಕೆಎಂಎಫ್ ಏಜನ್ಸಿ ನೀಡುವ ಸಂದರ್ಭ ಕ್ಯಾನ್ಸರ್, ಕಿಡ್ನಿ ಸಮಸ್ಯೆ ಮುಂತಾದ ಮಾರಣಾಂತಿಕ ಸಮಸ್ಯೆ ಇರುವವರಿಗೆ ಆದ್ಯತೆ ನೆಲೆಯಲ್ಲಿ ಅವಕಾಶ ನೀಡುವಂತೆ ಅವರು ಕೋರಿದರು.
ಮುಖ್ಯ ಅತಿಥಿ ದಕ ಸಂಸದರು ಮಾತನಾಡಿ, ಹೈನುಗಾರಿಗೆ ಲಾಭದಾಯಕವಾಗಿ ರೂಪಿಸುವ ದೃಷ್ಟಿಯಿಂದ ಹಾಲಿನ ಜತೆಗೆ, ಅದರ ಸೆಗಣಿ, ಗೋವು ಮೂತ್ರ ಮುಂತಾದ ಉಪ ಉತ್ಪನ್ನತಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು.
ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಮಾತನಾಡಿ, ಹೈನುಗಾರರಿಗೆ ಹೆಚ್ಚು ಶಕ್ತಿ ತುಂಬುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು, ಸರ್ಕಾರ ಕೆಲಸ ಮಾಡಬೇಕು . ವಿಧಾನಸಭೆಯಲ್ಲಿ ಹೈನುಗಾರರ ಸಮಸ್ಯೆ ಬಗ್ಗೆ ಗಮನ ಸೆಳೆಯುವುದಾಗಿ ತಿಳಿಸಿದರು.
ದಕ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್ ಕೆ., ಮಂಜುನಾಥ ಭಂಡಾರಿ, ಮಹಾನಗರ ಪಾಲಿಕೆ ಸದಸ್ಯ ಭಾಸ್ಕರ್ ಕೆ., ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ., ಉಪ ನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಎನ್., ನಿರ್ದೇಶಕರಾದ ರವಿರಾಜ ಹೆಗ್ಡೆ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ನರಸಿಂಹ ಕಾಮತ್, ಬಿ.ಸುಧಾಕರ ರೈ, ಸುಧಾಕರ ಶೆಟ್ಟಿ, ಸುಭದ್ರಾರಾವ್, ಸವಿತಾಎನ್.ಶೆಟ್ಟಿ, ಸ್ಮಿತಾ ಆರ್.ಶೆಟ್ಟಿ, ಬಿ.ಸದಾಶೀವ ಶೆಟ್ಟಿ, ಕಮಲಾಕ್ಷ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು.

…………
3 ರೂ ಪ್ರೋತ್ಸಾಹ ಧನಕ್ಕೆ ಬೇಡಿಕೆ

ಪಶು ಆಹಾರ ದರ ಹೆಚ್ಚಳ, ಮೇವಿನ ಅಲಭ್ಯತೆ ಮುಂತಾದ ಕಾರಣಗಳಿಂದ ಹಾಲು ಉತ್ಪಾದನಾವೆಚ್ಚ ಹೆಚ್ಚಿರುವ ಹಿನ್ನೆಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ ಇತರ ಜಿಲ್ಲೆಗಳಿಗಿಂತ 3 ರೂ ಹೆಚ್ಚುವರಿ ಪ್ರೋತ್ಸಾಹಧನ ಒದಗಿಸುವಂತೆ ಅಧ್ಯಕ್ಷತೆ ವಹಿಸಿದ ದಕ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಕೋರಿದರು.
ಅವಿಭಜಿತ ದಕ ಜಿಲ್ಲೆಯಲ್ಲಿ ಒಕ್ಕೂಟವು ಪ್ರತಿದಿನ ಒಟ್ಟು 4.24 ಲಕ್ಷ ಲೀಟರ್ ಹಾಲು ಪೂರೈಸುತ್ತಿದೆ. ಇದರಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲಿ 3.5 ಲಕ್ಷ ಲೀಟರ್ ನಷ್ಟು ಹಾಲು ಮಾತ್ರ ಹೈನುಗಾರರಿಂದ ಪೂರೈಕೆಯಾಗುತ್ತಿದೆ. ದೈನಂದಿನ ಬಾಕಿ ಸುಮಾರು 1.60 ಲಕ್ಷ ಲೀಟರ್ ಹಾಲನ್ನು ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳಿಂದ ತೆಗೆದುಕೊಳ್ಳಲಾಗುತ್ತಿದೆ. ಜಿಲ್ಲೆಯ ಶೇ.95 ಜನರಿಗೆ ಒಕ್ಕೂಟ ಹಾಲು ಪೂರೈಸುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net