

ಹಾಸನ: ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಮೆಕ್ಕೆ ಜೋಳ ಬೆಳೆಗಾರರಿಗೆ ನೆರವಾಗಲು ಮುಂದಾಗಿರುವ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ಡಿ. 19 ರಿಂದ ಬೆಂಬಲ ಬೆಲೆಯಡಿ ಜೋಳ ಖರೀದಿಗೆ ನಿರ್ಧರಿಸಿದೆ.
ಕೋವಿಡ್ 19 ಹಾಗೂ ಬೆಲೆ ಇಳಿಕೆಯಿಂದ, ಯೋಗ್ಯ ಮಾರುಕಟ್ಟೆ ಸಿಗದೆ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಬೇಡಿಕೆಯಿಲ್ಲದೆ ಮೆಕ್ಕೆ ಜೋಳ ಕ್ವಿಂಟಾಲ್‌ಗೆ ಕೇವಲ 800 ರೂ.ನಂತೆ ಮಾರಾಟವಾಗುತ್ತಿದೆ. ದಲ್ಲಾಳಿಗಳ ಮಧ್ಯ ಪ್ರವೇಶದಿಂದ ಸೂಕ್ತ ಬೆಲೆ ಪಡೆಯುವಲ್ಲಿ ವಿಫಲರಾಗಿದ್ದ ರೈತರಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಮೆಕ್ಕೆ ಜೋಳ ಖರೀದಿಗೆ ನಿರ್ಧರಿಸಿದ ಬೆನ್ನಲ್ಲೇ ಕೆಸಿಎಂಎಫ್ ಜೋಳ ಕೊಳ್ಳಲು ಮುಂದಾಗಿರುವುದು ರೈತರಲ್ಲಿ ಹರ್ಷ ಉಂಟು ಮಾಡಿದೆ. ಪ್ರತಿ ಕ್ವಿಂಟಾಲ್‌ಗೆ 1520 ರೂ. ಬೆಲೆ ಸಹ ನಿಗದಿಪಡಿಸಲಾಗಿದೆ. ಮೆಕ್ಕ್ಕೆಜೋಳ ಬೆಳೆದಿರುವ ರೈತರ ನೋಂದಣಿ ಪ್ರಕ್ರಿಯೆಯನ್ನು ಡಿ. 19 ರಿಂದ ಪ್ರಾರಂಭಿಸಲಾಗುವುದು ಎಂದು ಪಶು ಆಹಾರ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ನಂಜುಂಡಸ್ವಾಮಿ ತಿಳಿಸಿದ್ದಾರೆ.
ಹಾಸನ ಹಾಲು ಒಕ್ಕೂಟದ ಪಶು ಆಹಾರ ಘಟಕಕ್ಕೆ 20 ಸಾವಿರ ಮೆಟ್ರಿಕ್ ಟನ್ ಮೆಕ್ಕೆ ಜೋಳದ ಅವಶ್ಯಕತೆಯಿದೆ. ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಜೋಳ ಖರೀದಿಗೆ ಕ್ರಮ ವಹಿಸಲಾಗಿದೆ. ಕೃಷಿ ಇಲಾಖೆ ಸಿದ್ಧಪಡಿಸಿರುವ ಈಖಖಿ ಆ್ಯಪ್ ಮೂಲಕ ಖರೀದಿ ಪ್ರಕ್ರಿಯೆ ಅನುಷ್ಠಾನಗೊಳಿಸಲಾಗುತ್ತಿದೆ. ಒಬ್ಬ ರೈತರಿಂದ ಗರಿಷ್ಠ 50 ಕ್ವಿಂಟಾಲ್ ಮೆಕ್ಕೆ ಜೋಳ ಖರೀದಿ ಮಾಡಲಾಗುತ್ತಿದೆ.
ಬೆಂಬಲ ಬೆಲೆಯಡಿ ಮೆಕ್ಕೆಜೋಳ ಮಾರಾಟಕ್ಕೆ ತಯಾರಿ ನಡೆಸುತ್ತಿರುವ ರೈತರು ಕೆಲ ನಿಯಮ ಪಾಲಿಸಬೇಕಾಗುತ್ತದೆ. ಪರಸ್ಪರ ಅಂತರ, ಸ್ಯಾನಿಟೈಸರ್, ಮಾಸ್ಕ್ ಧರಿಸಿದ್ದರೆ ಮಾತ್ರ ಖರೀದಿ ಕೇಂದ್ರಗಳಲ್ಲಿ ಪ್ರವೇಶ ನೀಡಲಾಗುವುದು. ರೈತರು ಹತ್ತಿರದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ವಾರದ ಯಾವುದೇ ದಿನ ಬೆಳಗ್ಗೆ 9ರ ನಂತರ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.
ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿಯಾಗಿರುವ ಸಂಖ್ಯೆಯೊಂದಿಗೆ ಹಾಲಿನ ಸಂಘಕ್ಕೆ ಭೇಟಿ ನೀಡಿ ಮೆಕ್ಕೆ ಜೋಳ ಸರಬರಾಜು ಮಾಡಲು ನೋಂದಾಯಿಸಿ ಸ್ವೀಕೃತ ಪತ್ರ ಪಡೆಯಬೇಕು. ಫ್ರೂಟ್ಸ್ ನೋಂದಣಿ ಪಡೆಯಲು ತಾಂತ್ರಿಕ ತೊಂದರೆ ಕಂಡುಬಂದರೆ ಹತ್ತಿರದ ರೈತ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು.