

ಶಾಸಕ ಕದಲೂರು ಉದಯ್ ವ್ಯಂಗ್ಯ * ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಕೆ.ಎಂ.ದೊಡ್ಡಿ : ನಿಖಿಲ್ ಕುಮಾರಸ್ವಾಮಿ ಅವರಿಗೆ ಯಾವುದೇ ಲಾಟರಿ ಹೊಡೆದಿಲ್ಲ, ಅವರ ತಾತ ಮತ್ತು ತಂದೆಯವರಿಗೆ ಲಾಟರಿ ಹೊಡೆದು ಪ್ರಧಾನಿ, ಮುಖ್ಯಮಂತ್ರಿಯಾದರು ಎಂದು ಶಾಸಕ ಕದಲೂರು ಉದಯ್ ವ್ಯಂಗ್ಯವಾಡಿದರು.
ಸಮೀಪದ ಮಠದ ಹೊನ್ನಾಯಕನಹಳ್ಳಿ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ಅನುದಾನದ ಹೊನ್ನಾಯಕನಹಳ್ಳಿ-ಹೊಸಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ ಕುಮಾರಸ್ವಾಮಿ ಅವರು ಬಹುಮತ ಪಡೆದು ಪ್ರಧಾನಿ, ಸಿಎಂ ಹುದ್ದೆ ಅಲಂಕರಿಸಲಿಲ್ಲ. ಇಬ್ಬರೂ ಆಕಸ್ಮಿಕವಾಗಿ ಲಾಟರಿ ಹೊಡೆದು ಸ್ಥಾನ ಪಡೆದರು ಎಂದು ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ದೇಶ, ರಾಜ್ಯದ ಜನ ಸ್ಪಷ್ಟ ಬಹುಮತ ನೀಡಿರಲಿಲ್ಲ. ಇತರ ಪಕ್ಷಗಳ ಸಹಾಯ ಪಡೆದೇ ಅವರು ಉನ್ನತ ಸ್ಥಾನಕ್ಕೆ ಏರಿದರು ಎಂಬುವುದು ನಿಖಿಲ್‌ಗೆ ತಿಳಿದಿಲ್ಲವೇನೋ ಎಂದು ಟೀಕಿಸಿದರು.
ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ 1,300 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ತಾಲೂಕಿನ ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗಿದೆ.
ಕ್ಷೇತ್ರದ ಅಭಿವೃದ್ಧಿ ಪರ್ವವನ್ನು ಸಹಿಸದವರು ಟೀಕೆಗಳನ್ನು ಮಾಡುತ್ತಿದ್ದಾರೆ. ಅವುಗಳಿಗೆ ಹೆದರುವ ಮಾತೇ ಇಲ್ಲ ಎಂದು ಉದಯ್ ತಿಳಿಸಿದರು.ಸರ್ಕಾರಿ ಶಾಲೆಗಳಲ್ಲಿ ಇಂಗೀಷ್ ಭಾಷೆ ಕಲಿಕಾ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಉದಯ್, ಸರ್ಕಾರಿ ಶಾಲಾ ಮಕ್ಕಳು ಆಂಗ್ಲ ಭಾಷೆ ಕಲಿಯಬಾರದೆ ? ಆಂಗ್ಲ ಮಾಧ್ಯಮ ಕೇವಲ ಖಾಸಗಿ ಶಾಲೆಗಳ ಮಕ್ಕಳಿಗೆ ಮಾತ್ರವೇ ? ಇಂಗ್ಲಿಷ್ ಭಾಷೆಯನ್ನು ಸರ್ಕಾರಿ ಶಾಲೆ ಮಕ್ಕಳೂ ಕಲಿತು ಪ್ರಗತಿ ಸಾಧಿಸಲಿ ಎಂದು ಆಶಿಸಿದರು. ತಾಲೂಕಿನ ಶೈಕ್ಷಣಿಕ ಪ್ರಗತಿಗಾಗಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಳೆದ 4 ವರ್ಷಗಳಿಂದ ಉಚಿತ ಪಠ್ಯ, ಪರಿಕರ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ ಎಂದರು.
ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ರಾಜೀವ್, ಮನ್ ಮುಲ್ ನಿರ್ದೇಶಕ ಹರೀಶ್‌ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಯುವ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಕಾವೇರಿ ನೀರಾವರಿ ನಿಗಮದ ಎಇಇ ಪ್ರಶಾಂತ್, ಮುಖಂಡರಾದ ಹೊನ್ನಾಯಕನಹಳ್ಳಿ ಮಹೇಂದ್ರ, ವಿಜಯ್ ಕುಮಾರ್, ಪುನೀತ್, ಯೋಗಾನಂದ, ರಾಜಣ್ಣ ,ಅಶೋಕ್,ರಾಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.