

ಕೆ.ಎಂ.ದೊಡ್ಡಿ : ರಾಜ್ಯ ಸರ್ಕಾರವನ್ನು ಟೀಕಿಸುವುದಷ್ಟೇ ಬಿಜೆಪಿ ನಾಯಕರ ಕೆಲಸವಾಗಿದೆ ಎಂದು ಶಾಸಕ ಕದಲೂರು ಉದಯ್ ಲೇವಡಿ ಮಾಡಿದರು.
ಸಮೀಪದ ಯಲಾದಹಳ್ಳಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ರಾಜ್ಯ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸಹಿಸದೆ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದು ದೂರಿದರು.
ಹೆದ್ದಾರಿ ಟೋಲ್‌ಗಳನ್ನು ನಿರ್ಮಿಸಿ ಅದರಲ್ಲಿ ಬಂದ ಹಣವನ್ನು ವಸೂಲಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಅವರು ಮಾಡಿರುವ ತಪ್ಪುಗಳನ್ನು ಸರಿಪಡಿಸುವುದೆ ನಮ್ಮ ಸರ್ಕಾರದ ದೊಡ್ಡ ಕೆಲಸವಾಗಿದೆ ಎಂದು ವಿಜಯೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಒಬ್ಬ ಮುಖ್ಯಮಂತ್ರಿ ಲಂಚ ಪಡೆದು ಜೈಲು ಸೇರಿದ್ದು, ಇಳಿವಯಸ್ಸಿನಲ್ಲಿ ಪೋಸ್ಕೋ ಪ್ರಕರಣದಡಿ ಸಿಲುಕಿರುವ ಉದಾಹರಣೆ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ, ಬಿಜೆಪಿ ಸರ್ಕಾರ ಎಷ್ಟು ಹಗರಣ ಮಾಡಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಿದ್ದು ಆ ಪಕ್ಷವನ್ನು ತಿರಸ್ಕರಿಸಿ ಕಳೆದ ವಿಧಾನಸಭೆ ಚುನಾಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ ಎಂದರು. ರಾಜ್ಯದ ಅಭಿವೃದ್ಧಿ ಕಂಡು ಬಿಜೆಪಿ ನಾಯಕರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದು, ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯ ಅಭಿವೃದ್ಧಿಯಾಗುತಿಲ್ಲ ಎಂದು ಬೊಬ್ಬೆ ಹೊಡೆಯುತಿದ್ದಾರೆ. ಕೇಂದ್ರ ಸರ್ಕಾರ ಸರಿಯಾದ ರೀತಿಯಲ್ಲಿ ಅನುದಾನ ನೀಡುತ್ತಿಲ್ಲ. ಈ ಸಂಬಂಧ ಬಿಜೆಪಿ ಅವರು ಸ್ವಪಕ್ಷದ ಬಗ್ಗೆ ಮಾತನಾಡದೆ, ಜನರ ಪರವಾಗಿ ಉತ್ತಮ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಸಲ್ಲದ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಾನು ಶಾಸಕನಾದ ಬಳಿಕ ಕ್ಷೇತ್ರದ ಅಭಿವೃದ್ಧಿಗೆ 1000 ಕೋಟಿ ರೂ. ಅನುದಾನ ತಂದಿದ್ದೇನೆ. ಮದ್ದೂರು ತಾಲೂಕಿನ ಅಭಿವೃದ್ಧಿಗೆ ನಾನು ಪಣ ತೊಟ್ಟಿದ್ದು ಈ ಬಗ್ಗೆ ಮುಖ್ಯಮಂತ್ರಿ ವಿಶೇಷ ಯೋಜನೆಯಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಪಡಿಸುತ್ತೇನೆ. ನನ್ನ ಬಗ್ಗೆ ಮಾಡುವ ಟೀಕೆಗಳು ಸಾಯುತ್ತವೆ. ನಾನು ಮಾಡಿರುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.
ಜಿಪಂ ಮಾಜಿ ಸದಸ್ಯ ಎ.ಎಸ್. ರಾಜೀವ್, ತಾಪಂ ಮಾಜಿ ಸದಸ್ಯ ದ್ಯಾವೇಗೌಡ, ಗ್ರಾಪಂ ಅಧ್ಯಕ್ಷ ಗುಡ್ಡಪ್ಪ ಸಿದ್ದರಾಜು, ಮುಖಂಡರಾದ ನಿಂಗೇಗೌಡ, ನಂಜುಂಡೇಗೌಡ, ಕೃಷ್ಣೇಗೌಡ, ದೇವೇಗೌಡ, ವೈ.ಎಂ.ರವಿ, ವೈ.ಡಿ.ದೇವರಾಜು, ಮಹೇಶ್, ದೊರೆ, ಚಿಕ್ಕಣ್ಣ, ಮಾಲಯ್ಯ ಇದ್ದರು.