

ಕೆ.ಎಂ.ದೊಡ್ಡಿ : ಪ್ರತಿಯೊಬ್ಬರಿಗೂ ಇಂದು ಮೌಲ್ಯಧಾರಿತ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಧ್ಯಾಪಕಿ ಡಾ.ಕೆಂಪಮ್ಮ ಹೇಳಿದರು.ಭಾರತೀ ವಿದ್ಯಾಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಭಾರತೀ ಸಂಯುಕ್ತ ಪದವಿ ಪೂರ್ವ ಕಾಲೇಜು(ಎಕ್ಸ್‌ಲೆನ್ಸ್) ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ಶಿಕ್ಷಣ ಪಡೆಯಲು ಸಿದ್ಧರಾಗಬೇಕು ಎಂದು ಅವರು ನುಡಿದರು. ಎಲ್ಲ ದಾನಗಳಿಗಿಂತ ಶ್ರೇಷ್ಠದಾನ ಎಂದರೆ ಅದು ವಿದ್ಯಾದಾನ. ಅನ್ನದಾನ ಕ್ಷಣಿಕ ತೃಪ್ತಿ ನೀಡಿದರೆ ಶಿಕ್ಷಣ ದಾನ ಒಬ್ಬ ವ್ಯಕ್ತಿಯನ್ನು ಸ್ವಾಲಂಬಿಯನ್ನಾಗಿ ಮಾಡುತ್ತದೆ ಎಂದು ಡಾ.ಕೆಂಪಮ್ಮ ಹೇಳಿದರು.
ಪಠ್ಯೇತರ ಚಟುವಟಿಕೆಗಳೂ ಬೇಕು: ಪ್ರತಿಯೊಬ್ಬ ವಿದ್ಯಾರ್ಥಿಗೆ ಪಠ್ಯ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಮುಖ್ಯ. ಎನ್ನೆಸ್ಸೆಸ್, ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ರೀತಿಯ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ವೃದ್ಧಿಸುತ್ತವೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಮೊಬೈಲ್ ಫೋನ್ ವ್ಯಸನದಿಂದ ದೂರವಾಗಿರಬೇಕು ಎಂದು ಕಿವಿಮಾತುಹೇಳಿದ ಅವರು, ಸುಪ್ತ ಪ್ರತಿಭೆಗಳನ್ನು ಹೊರತರಲು ಸೂಕ್ತ ವೇದಿಕೆಗಳನ್ನು ಶಿಕ್ಷಣ ಸಂಸ್ಥೆಗಳು ಒದಗಿಸಿ ಕೊಡುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬೇಕು ಎಂದು ಡಾ.ಕೆಂಪಮ್ಮ ಹೇಳಿದರು.
ಕೀರ್ತಿ ತರುವಂತಾಗಬೇಕು: ಸಮಾರಂಭ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ, ಶಿಕ್ಷಣ ಸಂಸ್ಥೆ ಚೇರ‌್ಮನ್ ಮಧು ಜಿ.ಮಾದೇಗೌಡ ಮಾತನಾಡಿ, ನನ್ನ ತಂದೆ ಜಿ.ಮಾದೇಗೌಡ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗಾಗಿ ಸ್ಥಾಪಿಸಿದ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಬೇಕು. ಶಾಲೆ, ಕಾಲೇಜಿಗೆ, ಪಾಲಕರಿಗೆ ಕೀರ್ತಿ ತರಬೇಕು ಎಂದರು.