

ಹುಬ್ಬಳ್ಳಿ : ಹುಬ್ಬಳ್ಳಿಯ ಕೆಎಂಸಿಆರ್ಐನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನರ್ಸ್ಗಳಿಗೆ 7ನೇ ವೇತನ ಆಯೋಗ ಜಾರಿಗೊಳಿಸುವಂತೆ ಶಾಸಕರಾದ ಚಂದ್ರು ಲಮಾಣಿ ಹಾಗೂ ಮಹೇಶ ಟೆಂಗಿನಕಾಯಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರು ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಶಾಸಕರು, ಗುತ್ತಿಗೆ ಆಧಾರದ ನರ್ಸ್ಗಳು ಕೋವಿಡ್ ಸಮಯದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರಿಗೆ 7ನೇ ವೇತನ ಆಯೋಗದಂತೆ ಸಂಬಳ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಶರಣ ಪ್ರಕಾಶ ಪಾಟೀಲ, ಗುತ್ತಿಗೆ ಆಧಾರದ ನರ್ಸ್ಗಳಿಗೂ 7ನೇ ವೇತನ ಜಾರಿಗೊಳಿಸುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಉತ್ತರ ಬಂದಿಲ್ಲ ಎಂದು ತಿಳಿಸಿದರು.
ಸಚಿವರ ಉತ್ತರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಚಂದ್ರು ಲಮಾಣಿ, ಗುತ್ತಿಗೆ ನರ್ಸ್ಗಳಿಗೆ 7ನೇ ವೇತನ ಆಯೋಗದಡಿ ಸಂಬಳ ನೀಡಲು ಸಾಧ್ಯವಿಲ್ಲವೆಂದು ಈಗಾಗಲೇ ಆರ್ಥಿಕ ಇಲಾಖೆ ಉತ್ತರ ನೀಡಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕೆಎಂಸಿಆರ್ಐ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಶಾಸಕ ಚಂದ್ರು ಲಮಾಣಿ ಅವರು ಕೆಎಂಸಿಆರ್ಐನ ವಿದ್ಯಾರ್ಥಿಯಾಗಿದ್ದಾರೆ. ಕೋವಿಡ್ ಸಮಯದಲ್ಲಿ ಅಲ್ಲಿನ ಗುತ್ತಿಗೆ ನರ್ಸ್ಗಳ ಕಾರ್ಯವೈಖರಿಯನ್ನು ನೋಡಿದ್ದೇವೆ. ಅವರಿಗೆ 7ನೇ ವೇತನ ಜಾರಿಗೊಳಿಸಲು ಆಗದಿದ್ದರೂ ಮೂಲ ವೇತನವನ್ನಾದರೂ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಶರಣ ಪ್ರಕಾಶ ಪಾಟೀಲ ಪ್ರತಿಕ್ರಿಯೆ ನೀಡಿ, ಆರ್ಥಿಕ ಇಲಾಖೆಯು ಪ್ರಸ್ತಾವನೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿಲ್ಲ. ಕೆಎಂಸಿಆರ್ಐನ ಗುತ್ತಿಗೆ ನರ್ಸ್ಗಳಿಗೆ 7ನೇ ವೇತನ ನೀಡಿದರೆ ರಾಜ್ಯದ ಎಲ್ಲ ಗುತ್ತಿಗೆ ನೌಕರರಿಗೂ ನೀಡಬೇಕಾಗುತ್ತದೆ. ಇದು ಸಾಧ್ಯವಾಗದಿದ್ದರೆ ಗುತ್ತಿಗೆ ನೌಕರರ ಸಂಬಳವನ್ನಾದರೂ ಹೆಚ್ಚಿಗೆ ಮಾಡುವ ಚಿಂತನೆ ಇದೆ ಎಂದು ಹೇಳಿದರು.