ಎದೆ ಸೀಳಿದ್ದ 98 ಸೆಂ.ಮೀ. ಪೈಪ್ ಹೊರತೆಗೆದ ಕೆಎಂಸಿಆರ್‌ಐ ವೈದ್ಯರು

h3-kmcri 2
Published on

ಹುಬ್ಬಳ್ಳಿ: ಲಾರಿ ಕ್ಲೀನರ್ ಎದೆ ಸೀಳಿದ್ದ 98ಸೆಂ.ಮೀ. ಪೈಪ್ ಹೊರ ತೆಗೆಯುವಲ್ಲಿ ಇಲ್ಲಿಯ ಕೆಎಂಸಿಆರ್‌ಐ ವೈದ್ಯರು ಯಶಸ್ವಿಯಾಗಿದ್ದಾರೆ.
ರಾಣೆಬೆನ್ನೂರಿನ ಹೂಲಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅ. 2ರಂದು ಬೆಳಗ್ಗೆ 4ಗಂಟೆಗೆ ಲಾರಿ ಮುಗುಚಿ ಬಿದ್ದು ಕ್ಲೀನರ್ ಹಾಗೂ ಶಿರಸಿಯ ಜವಳಮಕ್ಕಿ ಗ್ರಾಮದ ದಯಾನಂದ ಶಂಕರಬಡಗಿ (27) ಅವರ ಎದೆ ಸೀಳಿ ಸರ್ವಿಸ್ ರಸ್ತೆಯ ಕಬ್ಬಿಣದ ಪೈಪ್ ಹೊರ ಬಂದಿತ್ತು. ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲವೆಂದು ಹುಬ್ಬಳ್ಳಿಯ ಕೆಎಂಸಿಆರ್‌ಐನ ತುರ್ತು ಚಿಕಿತ್ಸಾ ಘಟಕಕ್ಕೆ ಕರೆ ತರಲಾಗಿತ್ತು. ಘಟಕದ ಮುಖ್ಯಸ್ಥ ಡಾ. ನಾಗರಾಜ ಚಾಂದಿ ಅವರು ಅಪಾಯವರಿತು ತುರ್ತು ಚಿಕಿತ್ಸೆ ನೀಡಿ ಹಿರಿಯ ವೈದ್ಯರ ಗಮನಕ್ಕೆ ತಂದರು. ಶೀಘ್ರವೇ ಶಸ್ತ್ರ ಚಿಕಿತ್ಸೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
ಇದಕ್ಕೂ ಮೊದಲು ವಿಕಿರಣಶಾಸ್ತ್ರ ವಿಭಾಗದಲ್ಲಿ ಅಲ್ಟ್ರಾಸೌಂಡ್ ತಪಾಸಣೆ ನಡೆಸಿ ಹೃದಯ ಹಾಗೂ ಪ್ರಮುಖ ರಕ್ತನಾಗಳಿಗೆ ಯಾವುದೆ ಹಾನಿಯಾಗಿಲ್ಲವೆಂದು ಡಾ. ವೀಣಾ ಮರಡಿ ಅವರು ನೀಡುತ್ತಾರೆ (ಪೈಪ್ ಅಡ್ಡಿಯಾದ ಹಿನ್ನೆಲೆಯಲ್ಲಿ ಸಿಸಿ ಸ್ಕಾೃನ್ ಮಾಡಲಾಗಲಿಲ್ಲ). ಇದರ ಆಧಾರದಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗದ ಸಿ ಯುನಿಟ್ ಮುಖ್ಯಸ್ಥ ಡಾ. ರಮೇಶ ಹೊಸಮನಿ, ವಿವಿಧ ವಿಭಾಗದ ಡಾ. ವಿಜಯ ಕಾಮತ್, ಡಾ. ವಿನಾಯಕ ಬ್ಯಾಟೆಪ್ಪನವರ, ಡಾ. ವಸಂತ ತೆಗ್ಗಿನಮನಿ, ಹೃದ್ರೋಗ ಶಸ್ತ್ರಚಿಕಿತ್ಸಕ ಡಾ. ಕೋಬಣ್ಣ ಕಟ್ಟಿಮನಿ, ಡಾ. ಧರ್ಮೇಶ ಲದ್ದಡ ನೇತೃತ್ವದ ವೈದ್ಯಕೀಯ ತಂಡವು ಮಧ್ಯಾಹ್ನ 2ರಿಂದ 4.30ರವರೆಗೆ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆ ನಡೆಸಿದೆ.
‘ಎದೆ ಮೂಳೆ ಕೆಲವೆಡೆ ಮುರಿದಿತ್ತು. ಶ್ವಾಸಕೋಶ ಹಾನಿಯಾಗಿತ್ತು. ಎದೆ ಹಿಂಭಾಗದಿಂದ ಹೊರಬಂದಿರುವ ಪೈಪ್‌ನೊಂದಿಗೆ ಸಣ್ಣ ಕೊಂಡಿಯೂ ಇತ್ತು. ಹೃದಯದ ಸನಿಹವೇ ಪೈಪ್ ಹಾದು ಹೋಗಿತ್ತು. ಇದೆಲ್ಲವನ್ನೂ ಬಹು ಎಚ್ಚರಿಕೆಯಿಂದ ನಿಭಾಯಿಸಿ 98 ಸೆಂ.ಮೀ. ಪೈಪ್ ಎದೆಯಿಂದ ಹೊರ ತೆಗೆಯಲಾಗಿದೆ’ ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್. ಎಫ್. ಕಮ್ಮಾರ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಾ. ರಮೇಶ ಹೊಸಮನಿ ಮಾತನಾಡಿ, ಈಗ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೆರಡು ದಿನ ತೀವ್ರ ನಿಗಾ ಘಟಕದಲ್ಲಿ ಇರಲಿದ್ದಾರೆ. ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ತದನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ಹಾಗೂ ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ ಮಾತನಾಡಿ, ಆರಂಭದಲ್ಲಿ ನೋಡಿದ ವ್ಯಕ್ತಿಗೂ ಈಗ ನೋಡುವುದಕ್ಕೂ ವ್ಯತ್ಯಾಸವಾಗಿದೆ. ಶುಲ್ಕ ರಹಿತ ಚಿಕಿತ್ಸೆ ನೀಡಲಾಗಿದೆ. 7 ಬಾಟಲ್ ರಕ್ತ ನೀಡಲಾಗಿದೆ. ರಜೆ ದಿನವೂ ನಮ್ಮ ವೈದ್ಯಕೀಯ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಿದೆ. ಅದೂ ಕ್ಲಿಷ್ಟಕರವಾದದು ಎಂಬುದು ಗಮನಾರ್ಹ ಎಂದರು.
ಆರ್‌ಎಂಒ ಡಾ. ಸಿದ್ದೇಶ್ವರ ಕಟಕೋಳ, ಡಾ. ರಾಜಶೇಖರ ದ್ಯಾಬೇರಿ, ಡಾ. ಮಾಧುರಿ ಕುರ್ಡಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net