ಕೆಎಂಸಿಆರ್​ಐ ಏಮ್ಸ್​ನಷ್ಟೇ ಪ್ರಭಾವಶಾಲಿ

kmcri final
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯು (ಕೆಎಂಸಿಆರ್​ಐ)ಯು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಷ್ಟೇ (ಏಮ್ಸ್) ಪ್ರಭಾವಶಾಲಿಯಾಗಿದೆ. ಇಲ್ಲಿ ಇನ್ನೂ ಹೆಚ್ಚಿನ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಬದಲು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕುರಿತು ಈ ರೀತಿ ಪ್ರತಿಕ್ರಿಯೆ ನೀಡಿದರು.

ಹಿಂದುಳಿದ ಪ್ರದೇಶವಾದ ರಾಯಚೂರಿನಲ್ಲಿ ಏಮ್್ಸ ಸ್ಥಾಪನೆ ಬಗ್ಗೆ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲೇ ಘೊಷಿಸಲಾಗಿತ್ತು. ಅದರಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲಾಗಿತ್ತು. ಕೆಎಂಸಿಆರ್​ಐ ಏಮ್ಸ್​ಗಿಂತ ಯಾವ ರೀತಿಯಲ್ಲೂ ಕಡಿಮೆ ಇಲ್ಲ. ಇಲ್ಲಿ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಗಳಿವೆ. ಜತೆಗೆ ಪಕ್ಕದಲ್ಲೇ ಡಿಮ್ಹಾನ್ಸ್ ಸಹ ಇದೆ ಎಂದರು.

ಹುಬ್ಬಳ್ಳಿಗೆ ಮಂಜೂರಾಗಿದ್ದ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಹಿಂದಿನ ಸರ್ಕಾರ ಬೆಳಗಾವಿಗೆ ಸ್ಥಳಾಂತರಿಸಿದೆ. ಹುಬ್ಬಳ್ಳಿ ಕೆಎಂಸಿಅರ್​ಐನಲ್ಲಿ ಕ್ಯಾನ್ಸರ್​ಗೆ ಸಂಬಂಧಿಸಿದ ಕಿಮೋಥೆರಪಿ, ಲಿನಿಯಾಕ್ ಸೇರಿದಂತೆ ಇನ್ನಿತರ ಚಿಕಿತ್ಸಾ ಸೌಲಭ್ಯಗಳಿವೆ. ಕೆಎಂಸಿಆರ್​ಐನಲ್ಲಿ ಐವಿಎಫ್ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. 8 ಮಾಡ್ಯುಲರ್ ಶಸ್ತ್ರಚಿಕಿತ್ಸೆ ಕೊಠಡಿ ಮಂಜೂರಾಗಿದೆ. ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲಾಗಿದೆ. ವಿದ್ಯಾರ್ಥಿ ನಿಲಯ ನವೀಕರಿಸಲಾಗುತ್ತಿದೆ ಎಂದು ಹೇಳಿದರು.

ಕೆಎಂಸಿಆರ್​ಐಗೆ ಸೌಲಭ್ಯಗಳಲ್ಲಿ ಏನಾದರೂ ಕೊರತೆ ಇದ್ದಲ್ಲಿ, ಈ ಬಗ್ಗೆ ಗಮನಕ್ಕೆ ತಂದರೆ ಅದನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕೋವಿಡ್ ಸಂದರ್ಭದಲ್ಲಿ ನೂರಾರು ಕೋಟಿ ರೂ. ಹಗರಣ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಅದರ ಬಗ್ಗೆ ತನಿಖೆ ನಡೆಸುವುದು ಸರ್ಕಾರದ ಕರ್ತವ್ಯವಾಗಿದೆ. ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ತನಿಖೆ ನಡೆಸಿದ್ದೇವೆ. ಅವರು ಮಧ್ಯಂತರ ವರದಿ ನೀಡಿದ್ದಾರೆ. ಮಧ್ಯಂತರ ವರದಿ ಪರಿಶೀಲಿಸಿ ಕ್ರಮಕ್ಕೆ ಶಿಫಾರಸು ಮಾಡಲು ಸಮಿತಿ ರಚಿಸಲಾಗಿದೆ. ಅಂತಿಮ ವರದಿ ನೀಡಲು 6 ತಿಂಗಳು ಕಾಲಾವಕಾಶ ನೀಡಲಾಗಿದೆ. ಈ ವಿಷಯದಲ್ಲಿ ನಾವು ಎಲ್ಲೂ ಆತುರಪಟ್ಟಿಲ್ಲ. ಬಿಜೆಪಿ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net