ತಾಯಿ ಮರಣ ಪ್ರಮಾಣ ಕಡಿಮೆಗೊಳಿಸಲು ತ್ವರಿತ ಕ್ರಮ ಅಗತ್ಯ

udp-30-kmc
Published on

ಉಡುಪಿ: ವೈದ್ಯರು ಹಾಗೂ ರೋಗಿಯ ನಡುವೆ ಮಾನವೀಯ ಅನುಬಂಧ ಅಗತ್ಯ. ಅಶಾ ಕಾರ್ಯಕರ್ತೆಯರು ಗರ್ಭಿಣಿಯರಿಗೆ ಸೂಕ್ತ ಅರಿವು ಮೂಡಿಸಿದಲ್ಲಿ ತಾಯಿ ಮರಣ ಪ್ರಮಾಣವನ್ನು ಕಡಿಮೆಗೊಳಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.

ಬುಧವಾರ ನಗರದ ಕೆ.ಎಂ.ಸಿ. ಮಣಿಪಾಲದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಪ್ರಧಾನ್​ ಮಂತ್ರಿ ಸುರಕ್ಷತಾ ಮಾತೃತ್ವ ಅಭಿಯಾನದಡಿಯಲ್ಲಿ ಜಿಲ್ಲೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಹಾಗೂ ವೈದ್ಯಾಧಿಕಾರಿಗಳಿಗೆ ಹೆಚ್ಚಿನ ಅಪಾಯದ ಗರ್ಭಧಾರಣೆಯ ನಿರ್ವಹಣೆ ಕುರಿತು ನಡೆದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಮಾತನಾಡಿದರು. ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಮಾತನಾಡಿ, ಪ್ರತಿ ತಿಂಗಳು 9 ಮತ್ತು 24 ನೇ ದಿನಾಂಕಗಳಂದು ಖಾಸಗಿ ವೈದ್ಯರು ಸಮೀಪದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಸವ ಪೂರ್ವ ಆರೈಕೆ ಸೇವೆ ನೀಡಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೆ.ಎಂ.ಸಿ ಮಣಿಪಾಲದ ಡೀನ್​ ಡಾ. ಪದ್ಮರಾಜ್​ ಹೆಗ್ಡೆ, ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ, ಆರ್​.ಸಿ.ಹೆಚ್​. ಅಧಿಕಾರಿ ಡಾ. ಎಂ.ಜಿ. ರಾಮ, ಕೆ.ಎಂ.ಸಿ. ವೀಕ್ಷಕ ಡಾ. ಶರತ್ಚಂದ್ರ, ಪ್ರಸೂತಿ ಹಾಗೂ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥ ಡಾ. ಶ್ರೀಪಾದ್​ ಹೆಬ್ಬಾರ್​, ಸಮುದಾಯ ವೈದ್ಯಕಿಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್​ ಉಪಸ್ಥಿತರಿದ್ದರು. ಡೀನ್​ ಡಾ. ಪದ್ಮರಾಜ್​ ಹೆಗ್ಡೆ ಸ್ವಾಗತಿಸಿ, ಡಾ. ಸ್ನೇಹಾ ಡಿ. ಮಲ್ಯ ನಿರೂಪಿಸಿ, ಡಾ. ಶ್ರೀಪಾದ್​ ಹೆಬ್ಬಾರ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net