

ಉಡುಪಿ: ಲಂಡನ್ ಲ್ಯಾನ್ಸೆಟ್ ಆಯೋಗ ಆಯುಕ್ತರಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕಿಯ ಕಾಲೇಜಿನಲ್ಲಿ ಉಪಶಾಮಕ ಔಷಧ ವಿಭಾಗದ ಮುಖ್ಯಸ್ಥ ಹಾಗೂ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕ ಡಾ. ನವೀನ್ ಸಾಲಿನ್ಸ್ ನೇಮಕಗೊಂಡಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ಡಾ.ಸಾಲೀನ್ಸ್ ನೇತೃತ್ವದ ತಂಡವು ಕ್ಯಾನ್ಸರ್ ಸಂಶೋಧನೆ, ಶಿಕ್ಷಣ ಮತ್ತು ಕ್ಲಿನಿಕಲ್ ಕೇರ್ಗೆ ಸಂಪನ್ಮೂಲ ಹಂಚಿಕೆ, ವಾಣಿಜ್ಯ ಅಂಶಗಳನ್ನು ಪರಿಶೀಲಿಸಿ ಕಾರ್ಯತಂತ್ರದ ವಿಧಾನಗಳನ್ನು ರೂಪಿಸಲಿದೆ. ಆಯೋಗವು ಯುರೋಪ್, ಏಷ್ಯಾ, ಆಫ್ರಿಕಾ, ದಕ್ಷಿಣ ಅಮೇರಿಕಾ ಮತ್ತು ಓಷಿಯಾನಿಯಾದಿಂದ ವಿಶೇಷ ತಜ್ಞರನ್ನು ಸದಸ್ಯರನ್ನಾಗಿ ಹೊಂದಿದೆ.
ಸಾಲೀನ್ಸ್ ಅವರು, ನೆದರ್ಲ್ಯಾಂಡ್ಸ್ನ ರೋಟರ್ಡ್ಯಾಮ್ನಲ್ಲಿರುವ ಯುರೋಪಿಯನ್ ಅಸೋಸಿಯೇಶನ್ ಆಫ್ ಪ್ಯಾಲಿಯೇಟಿವ್ನಿಂದ ಪ್ರತಿಷ್ಠಿತ ಅಂತರಾಷ್ಟ್ರೀಯ ಉಪಶಾಮಕ ಆರೈಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಕ್ಯಾನ್ಸರ್ನಿಂದ ಆಗಿರುವ ಜಾಗತಿಕ ಆರೋಗ್ಯದ ಹೊರೆಯನ್ನು ಪರಿಹರಿಸುವಲ್ಲಿ ಹಾಗೂ ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಮುನ್ನಡೆಸಲು ಇದು ಭಾರತಕ್ಕೆ ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ.