

ಮಂಗಳೂರು: ಅತ್ತಾವರದಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಮಂಗಳವಾರ ವಿಶ್ವ ದಾದಿಯರ ದಿನಾಚರಿಸಲಾಯಿತು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿ ಮತ್ತು ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಈ ಮೂರೂ ಆಸ್ಪತ್ರೆಗಳ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಡಾ. ಸುಭ ಸೂರಿಯ ಪಿ. ಮುಖ್ಯ ಅತಿಥಿಯಾಗಿದ್ದರು. ಪ್ರಾಯೋಗಿಕ ಕೌಶಲ್ಯ ಮತ್ತು ಆತ್ಮವಿಶ್ವಾಸ ಹೊಂದಿರುವ ದಾದಿಯರು ನಿಜವಾಗಿಯೂ ಸಶಕ್ತ ದಾದಿಯರು. ಮುಂದಿನ ಪೀಳಿಗೆಯ ಆರೈಕೆದಾರರೊಂದಿಗೆ ತಮ್ಮ ಬುದ್ಧಿವಂತಿಕೆ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ಅನುಭವಿ ದಾದಿಯರಿಗೆ ಕರೆ ನೀಡಿದರು.
ಸೇವೆಯಲ್ಲಿ ದೇವರನ್ನು ಕಂಡ ಹಾಗೂ ಮಾನವ ಕುಲಕ್ಕೆ ಸೇವೆಯನ್ನು ಸಲ್ಲಿಸುತ್ತಿರುವ ಅನೇಕ ಮಾನವೀಯ ದಾದಿಯರ ಪ್ರತಿನಿಧಿಯಾದ ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಹೂಗಳನ್ನು ಅರ್ಪಿಸುವುದರ ಮೂಲಕ ಗೌರವವನ್ನು ಸಲ್ಲಿಸಲಾಯಿತು. ನರ್ಸಿಂಗ್ ಸಿಬ್ಬಂದಿ ಹಾಗೂ ಅತಿಥಿಗಳು ಕೇಕನ್ನು ಕತ್ತರಿಸುವುದರ ಮೂಲಕ ದಿನವನ್ನು ಸಂಭ್ರಮಿಸಿದರು.
ಕೆಎಂಸಿ ಆಸ್ಪತ್ರೆ ಅತ್ತಾವರದ ಉಪ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಮಡಿ ಮಾತನಾಡಿ, ದಾದಿಯರು ಆಸ್ಪತ್ರೆಯ ಆಧಾರ ಸ್ಥಂಭಗಳು. ಆಸ್ಪತ್ರೆಯಲ್ಲಿ ದಾದಿಯರು ಇಲ್ಲದೆ ಕೇವಲ ವೈದ್ಯರು ಮಾತ್ರ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವುದು ಅಸಾಧ್ಯ. ದಿನವಿಡೀ ರೋಗಿಗಳ ಜೊತೆ ಇದ್ದು ಅವರಿಗೆ ಬೇಕಾದಂತಹ ಆರೈಕೆ, ಸಾಂತ್ವನ, ಧೈರ್ಯವನ್ನು ನೀಡುವವರು ದಾದಿಯರು. ಇಂತಹ ಒಂದು ಪವಿತ್ರವಾದ ವೃತ್ತಿಯನ್ನು ಆರಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಎಲ್ಲಾ ದಾದಿಯರಿಗೆ ಕೃತಜ್ಞತೆ ಸಲ್ಲಿಸಿದರು.
ಕೆ.ಎಂ.ಸಿ. ಅಸ್ಪತ್ರೆ ಅತ್ತಾವರದ ನರ್ಸಿಂಗ್ ಅಧೀಕ್ಷಕಿ ಗ್ರೇಸಿ ಲೋಬೋ ಉಪಸ್ಥಿತರಿದ್ದು, ಆಸ್ಪತ್ರೆಯ ಎಲ್ಲಾ ನರ್ಸಿಂಗ್ ಸಿಬ್ಬಂದಿಗಳಿಗೆ ಶುಭ ಹಾರೈಸಿದರು. ವಿಶ್ವ ದಾದಿಯರ ದಿನಾಚರಣೆಯ ಅಂಗವಾಗಿ ಅನೇಕ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ವಿಜೇತರಾದ ದಾದಿಯರಿಗೆ ಅತಿಥಿಗಳು ಬಹುಮಾನ ನೀಡಿ ಅಭಿನಂದಿಸಿದರು
.
ಮಾಹೆ ಮಣಿಪಾಲದ ಚೀಫ್ ಅಪರೇಟಿಂಗ್ ಆಫೀಸರ್ ಡಾ. ಆನಂದ್ ವೇಣುಗೋಪಾಲ್, ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಶಿವಾನಂದ ಪ್ರಭು ಉಪಸ್ಥಿತರಿದ್ದರು.
. ಉಪ ನರ್ಸಿಂಗ್ ಅಧೀಕ್ಷಕಿ ಸೋಫಿಯಾ ಪಿಂಟೋ ವಂದಿಸಿದರು. ಫಾರ್ಮಸಿ ವಿಭಾಗದ ಶಾಹಿದಾ ಕಾರ್ಯಕ್ರಮ ನಿರೂಪಿಸಿದರು.