ಈ ಬಾರಿಯಾದರೂ ಕೊಡಗಿಗೆ ಸಚಿವ ಸ್ಥಾನ ಕೊಡಿ

KMB Ganesh
Published on

ಮಡಿಕೇರಿ:

ಸಿದ್ದರಾಮಯ್ಯ ನೇತೃತ್ವದ ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾದರೂ ಕೊಡಗಿಗೆ ಒಂದು ಸಚಿವ ಸ್ಥಾನ ಕೊಟ್ಟು ಸ್ಥಳೀಯರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ನ ಟ್ರಸ್ಟಿ ಕೆಎಂಬಿ ಗಣೇಶ್ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.

ಸಾಂಸ್ಕೃತಿಕ, ಕ್ರೀಡೆ ಹಾಗೂ ರಾಜಕೀಯವಾಗಿ ಜಿಲ್ಲೆಯ ಹೆಸರು ಉತ್ತುಂಗದಲ್ಲಿ ಇದೆ. ಹಿಂದೊಮ್ಮೆ ಕೊಡಗು ರಾಜ್ಯವೂ ಆಗಿತ್ತು. ಮೂರು ವಿಧಾನಸಭಾ ಕ್ಷೇತ್ರಗಳೂ ಇದ್ದವು. ಒಬ್ಬ ಮುಖ್ಯಮಂತ್ರಿ, ಪ್ರತಿಭಾವಂತ ವಿರೋಧ ಪಕ್ಷದ ನಾಯಕ ಹಾಗೂ ಒಬ್ಬರು ಸ್ಪೀಕರ್ ಅನ್ನು ರಾಜ್ಯಕ್ಕೆ ಜಿಲ್ಲೆ ಕೊಟ್ಟಿದೆ. ಆದರೆ ಬರ ಬರುತ್ತಾ ಕೊಡಗಿಗೆ ರಾಜಕೀಯ ಪ್ರಾತಿನಿಧ್ಯವೇ ಇಲ್ಲದಂತಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ವೇಳೆ ಕೊಡಗಿನಿಂದ ಮೂವರು ಸಚಿವರು ಸಂಪುಟದಲ್ಲಿ ಇದ್ದರು. ಆದರೆ ನಂತರ 15 ವರ್ಷಗಳಿಂದ ಕೊಡಗಿಗೆ ಒಬ್ಬರೂ ಸಚಿವರು ಇಲ್ಲ. ಬಿಜೆಪಿ ಆಡಳಿತದ ಅವಧಿಯಲ್ಲಿ ಜಿಲ್ಲೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ಇದ್ದರು. ಆಗಲೂ ಜಿಲ್ಲೆಗೆ ಒಂದು ಸಚಿವ ಸ್ಥಾನದ ಬೇಡಿಕೆ ಇಡಲಾಗಿತ್ತು. ಆದರೆ ಆ ಬೇಡಿಕೆ ಈಡೇರಿರಲಿಲ್ಲ.

ಈಗ ಸಿಎಂ ಸಿದ್ದರಾಮಯ್ಯ ಶುಕ್ರವಾರ (ಜ.31) ಕೊಡಗಿಗೆ ಬರುತ್ತಿದ್ದಾರೆ. ಅವರಿಗೂ ಈ ಸಂಬAಧ ಮನವಿ ಮಾಡಿಕೊಳ್ಳಲಾಗುವುದು. ಈಗ ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಜಿಲ್ಲೆಗೆ ಈಗಲಾದರೂ ಒಂದು ಮಂತ್ರಿ ಸ್ಥಾನ ಕೊಡಿ ಎಂದು ಕೇಳಿಕೊಳ್ಳಲಾಗುವುದು.

ಕೊಡಗು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. ಆದರೆ ಕರ್ನಾಟಕದ ಭೂಪಟದಲ್ಲಿ ರಾಜಕಾರಣಿಗಳು ಕೊಡಗನ್ನು ಮರೆತಿದ್ದಾರೆ. ಹೊರಗಿನ ಜನಪ್ರತಿನಿಧಿಗಳಿಗೆ ಕೊಡಗಿನ ಸಮಸ್ಯೆ ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸ್ಥಳೀಯರೇ ಆದ ಉಸ್ತುವಾರಿ ಸಚಿವರನ್ನು ಕೊಡಿ ಎಂದು ಮುಖ್ಯಮಂತ್ರಿಗೆ ಮನದಟ್ಟು ಮಾಡಲಾಗುವುದು.

ಮತ್ತೊಂದು ಕಡೆ ಕೊಡಗು ಒಳಗೊಳಗೆ ಉರಿಯುತ್ತಿದೆ. ಹಾಗಾಗಿ ಇದಕ್ಕೆ ಸಂಬAಧಿಸಿದ ಎರಡೂ ಸಮಯದಾಯದವರನ್ನು ಕೂರಿಸಿ ಮುಖ್ಯಮಂತ್ರಿ ಮಾತನಾಡಬೇಕು. ಸ್ಥಳೀಯರಿಗೆ ಶಾಂತಿ, ಸಹಬಾಳ್ವೆ ಬೇಕಾಗಿದೆ ಎಂದು ಹೇಳಿದರು.

ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಉಪಾಧ್ಯಕ್ಷೆ ಕೋಲೆಯಂಡ ನಿಶಾ ಮೋಹನ್, ಖಜಾಂಚಿ ಕೂಡಂಡ ಸೀಮಾ ಕಾವೇರಪ್ಪ, ಸದಸ್ಯರಾದ ಡ್ಯಾನಿ ಬರೋಸ್, ಸುಶೀಲಾ ಮಧು, ಮಂಜುಳಾ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net