

ಕೆ.ಎಂ.ದೊಡ್ಡಿ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಸುಪ್ರೀಂಕೋರ್ಟ್ ಆದೆೇಶ ಮಾಡಿರುವ ಕ್ರಮ ಖಂಡಿಸಿ ಚಾಮುಂಡೇಶ್ವರಿ ಲಾರಿ ಮತ್ತು ಟ್ರಾೃಕ್ಟರ್ ಮಾಲೀಕರು ಹಾಗೂ ಚಾಲಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಲಾರಿಗಳನ್ನು ರಸ್ತೆಗಿಳಿಸಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಮಾಲೀಕರು, ರಾಜ್ಯ ಮತ್ತು ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಲಾರಿ ಮತ್ತು ಟ್ರಾೃಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಎ.ಎಸ್.ರಾಜೀವ್ ಮಾತನಾಡಿ, ಜಿಲ್ಲೆಯ ರೈತರ ಬೆಳೆಗಳಿಗೆ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕನ್ನಂಬಾಡಿಯಲ್ಲಿ ನೀರು ಇಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡಿರುವ ಸುಪ್ರೀಂಕೋರ್ಟ್ ತೀರ್ಪನ್ನು ಮರುಪರಿಶೀಲಿಸಬೇಕು, ಕೂಡಲೇ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ಸಂಘದ ಗೌರವಾಧ್ಯಕ್ಷ ಅಕ್ಕೂರು ನಿಂಗಣ್ಣ, ಕಾರ್ಯದರ್ಶಿ ಕೆಂಪೇಗೌಡ, ಶಿವಕುಮಾರ್, ಅಣ್ಣೂರು ವರದರಾಜು, ಗೋರವನಹಳ್ಳಿ ಕಾಳಪ್ಪ, ಅಣ್ಣೂರು ಸಿದ್ದೇಗೌಡ, ರಾಜಕುಮಾರ್ ಸೇರಿದಂತೆ ಹಲವರಿದ್ದರು.