

ಕೆ.ಎಂ.ದೊಡ್ಡಿ: ಸಮೀಪದ ಗುರುದೇವರಹಳ್ಳಿಯಲ್ಲಿ ಶ್ರೀ ಸಿದ್ದೇಶ್ವರ ಗೆಳೆಯರ ಬಳಗದಿಂದ 71ನೇ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಭಾನುವಾರ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧೆಗೆ ಮಂಡ್ಯ, ತುಮಕೂರು, ಮೈಸೂರು, ಚಾಮರಾಜನಗರ, ಬೆಂಗಳೂರು, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 46 ಜೋಡೆತ್ತುಗಳು ಆಗಮಿಸಿದ್ದವು. ಗಾಳಿಯನ್ನು ಸೀಳಿಕೊಂಡು ಗುರಿಯತ್ತ ಮುನ್ನುಗ್ಗುತ್ತಿದ್ದ ಎತ್ತುಗಳ ಓಟವನ್ನು ಜನರು ಕಣ್ತುಂಬಿಕೊಂಡರು.
ಗ್ರಾಮಸ್ಥರು ಶಿಳ್ಳೆ ಹಾಗೂ ಚಪ್ಪಾಳೆ ಹೊಡೆಯುವ ಮೂಲಕ ಸ್ಪರ್ಧೆಯ ರೋಚಕತೆ ಹೆಚ್ಚಿಸಿದರು. ಕೆಲ ಯುವಕರು ತಮ್ಮ ಮೊಬೈಲ್‌ಗಳಲ್ಲಿ ಎತ್ತುಗಳ ಓಟವನ್ನು ಸೆರೆ ಹಿಡಿದು ಸಂಭ್ರಮಿಸಿದರು.
ಇದಕ್ಕೂ ಮುನ್ನ ಸ್ಪರ್ಧೆಗೆ ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಚಾಲನೆ ನೀಡಿದರು. ಬಿಜೆಪಿ ಯುವ ಘಟಕದ ಅಧ್ಯಕ್ಷ ಹಾಗಲಹಳ್ಳಿ ರಘು, ಅಭಿ, ಶ್ರೀಧರ್, ಕೃಷ್ಣ, ಸಚ್ಚಿ, ಮಹೇಶ್ ಇತರರಿದ್ದರು.