

ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಬೆಳೆಸುತ್ತಿರುವ ಕೆಎಲ್‌ಇ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಪಾರಂಪರಿಕ ನಾಟಿ ವೈದ್ಯ ಹನುಮಂತ ಮಳಲಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಡಾ.ಎಂ.ಎಸ್. ಶೇಷಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಕನ್ನಡ ಬಳಗ’ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ಕೆಎಲ್‌ಇ ಸಂಸ್ಥೆಯು ಕನ್ನಡ ಉಳಿಸಿ, ಬೆಳೆಸಿಕೊಂಡು ಬರುತ್ತಿದೆ. ಕನ್ನಡ ಭಾಷೆ ಬೆಳೆಸುವುದು ಅಗತ್ಯವಾಗಿದೆ. ಕನ್ನಡ ಭಾಷೆ, ಸಂಸ್ಕೃತಿ ಪ್ರೋತ್ಸಾಹಿಸುವುದಕ್ಕೆ ಗಡಿನಾಡಿನಲ್ಲಿ ಕನ್ನಡ ಬಳಗ ಮಾಡಿಕೊಂಡಿರುವುದೇ ಕೆಎಲ್‌ಇ ವಿಶೇಷತೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಕರು ದುಶ್ಚಟಗಳಿಂದ ದೂರ ಇರಬೇಕು. ಪ್ರತಿದಿನ ಅರ್ಧ ಗಂಟೆಯಾದರೂ ವ್ಯಾಯಾಮ ರೂಢಿಸಿಕೊಳ್ಳಬೇಕು. ಸಾವಯವ ಆಹಾರ ಪದಾರ್ಥಗಳನ್ನು ಬಳಸಿ ಆರೋಗ್ಯ ಸದೃಢಗೊಳಿಸಿಕೊಳ್ಳಬೇಕು. ಕಲಬೆರಕೆ ಎಣ್ಣೆಯ ಹಾವಳಿ ಹೆಚ್ಚಿದೆ. ಹೀಗಾಗಿ ಗಾಣದ ಎಣ್ಣೆ ಬಳುಸುವುದರಿಂದ ಆರೋಗ್ಯ ಗಟ್ಟಿಮುಟ್ಟಾಗುತ್ತದೆ. ಬಿಳಿ ಉಪ್ಪು, ಮೈದಾ, ಸಕ್ಕರೆ, ಪಾಲಿಸ್ ಅಕ್ಕಿಯಿಂದ ಬಿಟ್ಟು, ಕೆಂಪು ಅಕ್ಕಿ, ಕಪ್ಪು ಉಪ್ಪು ಬಳಸಬೇಕು ಎಂದು ಸಲಹೆ ನೀಡಿದರು.
ಸಾಹಿತಿ, ಪ್ರಾಧ್ಯಾಪಕ ಡಾ.ರಾಜಶೇಖರ ಬಿರಾದಾರ, ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಸ್.ಸಿ. ಮೆಟಗುಡ ಪ್ರಾಚಾರ್ಯ ಡಾ.ಎಸ್.ಎಫ್. ಪಾಟೀಲ, ಕನ್ನಡ ಬಳಗದ ಕಾರ್ಯದರ್ಶಿ ಡಾ. ರವಿರಾಜ ಹವಾಲ್ದಾರ, ವಿದ್ಯಾರ್ಥಿ ಕಾರ್ಯದರ್ಶಿ ವೀರಕುಮಾರ ತಡಕೋಡ ಇದ್ದರು. ಶ್ರವಣಾ ಪಾಟೀಲ, ಪ್ರೇರಣಾ ಚಿವಟಗುಂಡಿ ನಿರೂಪಿಸಿದರು. ಅಭಿಷೇಕ ಕುಲಗುಡೆ ವಂದಿಸಿದರು.ಪ್ರಣಯ ಕುಂಬಾರ, ಪ್ರಜ್ವಲ್ ಪಾಟೀಲ, ವಿಶ್ವನಾಥ ಅಂಕಲಗಿ, ಆಕಾಶ ತೆಗೂರು ಅವರಿಂದ ಮನರಂಜನೆ ಕಾರ್ಯಕ್ರಮ ಜರುಗಿತು.