ಜಾಗತಿಕ ಪಟ್ಟಿಯಲ್ಲಿ ಕೆಎಲ್ಇ ಟೆಕ್ ಸಂಶೋಧಕರು,  ಸ್ಟಾನ್ ಫೋರ್ಡ್ ಎಲ್ಸೆವಿಯರ್ ನಲ್ಲಿ ಸತತ 6ನೇ ಸಾಧನೆ

IMG-20250921-WA0029.jpg
Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಎಂಟು ಸಂಶೋಧಕರು ಮತ್ತು ಪ್ರಾಧ್ಯಾಪಕರು ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯ ಮತ್ತು ಎಲ್ಸೆವಿಯರ್ ಪ್ರಕಾಶನಗಳು ಸಂಯುಕ್ತವಾಗಿ ಬಿಡುಗಡೆ ಮಾಡಿದ 2025ರ ಟಾಪ್ ಪ್ರಭಾವಶಾಲಿ ವಿಜ್ಞಾನಿಗಳ ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇದು ಸತತ ಆರನೇ ವರ್ಷದ ಸಾಧನೆಯಾಗಿದ್ದು, ಕೆಎಲ್ಇ ಟೆಕ್‌ ಉನ್ನತ ಮಟ್ಟದ ಸಂಶೋಧನಾ ಕೀರ್ತಿಯನ್ನು ಮತ್ತೊಮ್ಮೆದೃಢಪಡಿಸಿದೆ.

ಸಂಶೋಧನಾ ಪ್ರಕಟಣೆಗಳು, ಉಲ್ಲೇಖನೆಗಳು (ಸೈಟೇಶನ್), ಎಚ್ -ಇಂಡೆಕ್ಸ್, ಸಹ-ಲೇಖಕರ ಹೊಂದಾಣಿಕೆ ಎಚ್ಎಂ ಇಂಡೆಕ್ಸ್ ಹಾಗೂ ಸಂಯುಕ್ತ ಸಿ -ಸ್ಕೋರ್ ಗಳ ಆಧಾರದ ಮೇಲೆ 22 ವೈಜ್ಞಾನಿಕ ಕ್ಷೇತ್ರಗಳಲ್ಲಿ ಪಟ್ಟಿಯನ್ನು ತಯಾರಿಸಲಾಗಿದೆ. ಈ ಪಟ್ಟಿಯಲ್ಲಿ ವಿಶ್ವದ 18,477 ವಿಜ್ಞಾನಿಗಳು, ಅದರಲ್ಲಿ ಭಾರತದಿಂದ 1,566 ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ.

ಕೆಎಲ್ಇ ಟೆಕ್ ನಿಂದ ಈ ಬಾರಿ ಸ್ಥಾನ ಪಡೆದ ಸಂಶೋಧಕರು ಇಂತಿದ್ದಾರೆ. ಪ್ರೊ. ತೇಜರಾಜ ಎಂ. ಅಮ್ಮಿನಭಾವಿ, ಡಾ. ನಾಗರಾಜ್ ಪಿ. ಶೆಟ್ಟಿ, ಡಾ. ಮೋಹನಕೃಷ್ಣ ಗುಂಡಾ, ಡಾ. ಶ್ವೇತಾ ಮಲೋಡೆ, ಪ್ರೊ. ಪ್ರಭುಗೌಡ ಎಂ. ಪಾಟೀಲ, ಪ್ರೊ. ಶರಣಬಸವ ವಿ. ಗಣಚಾರೀ (ಅಡ್ವಾನ್ಸ್ ಸೈನ್ಸ್ ಶಾಲೆಯಿಂದ), ಪ್ರೊ. ವಿನಾಯಕ ಗಾಯತೊಂಡೆ, ಪ್ರೊ. ನಾಗರಾಜ್ ಬಾಣಾಪುರಮಠ (ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಾಲೆಯಿಂದ).

ಪ್ರೊ. ತೇಜರಾಜ ಅಮ್ಮಿನಾಭಾವಿ ಮತ್ತು ಡಾ. ನಾಗರಾಜ್ ಶೆಟ್ಟಿ ಸತತ ಆರು ವರ್ಷಗಳಿಂದ ಅಂತಾರಾಷ್ಟ್ರೀಯ ಮಾನ್ಯತೆ ಪಡೆದುಕೊಂಡಿದ್ದು, ಗುಣಮಟ್ಟದ ಸಂಶೋಧನಾ ಕೊಡುಗೆಯ ಮೂಲಕ ವಿಶಿಷ್ಟ ಸ್ಥಾನ ಗಳಿಸಿದ್ದಾರೆ. ಡಾ. ಮೋಹನಕೃಷ್ಣ ಗುಂಡಾ ಐದನೇ ವರ್ಷ ಹಾಗೂ ಡಾ. ಶ್ವೇತಾ ಮಲೋಡೆ ನಾಲ್ಕನೇ ವರ್ಷದ ಸಾಧನೆ ಮಾಡಿದ್ದಾರೆ.

ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿ, ನಮ್ಮ ಸಂಶೋಧಕರಿಗೆ ಜಾಗತಿಕ ಮಟ್ಟದಲ್ಲಿ ದೊರೆತಿರುವ ಈ ಮಾನ್ಯತೆ ಕೆಎಲ್ಇ ಸಮಾಜಕ್ಕೆ ಅತ್ಯಂತ ಹೆಮ್ಮೆಯ ವಿಷಯ. ವೈಜ್ಞಾನಿಕ ಕ್ಷೇತ್ರದಲ್ಲಿ ನೀಡಿದ ಕ್ರಾಂತಿಕಾರಿ ಕೊಡುಗೆಗಳು ಕೆಎಲ್ಇ ಟೆಕ್‌ ಖ್ಯಾತಿಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿವೆ ಎಂದು ಹೇಳಿದ್ದಾರೆ.

ಸಮ ಕುಲಾಧಿಪತಿ ಡಾ. ಅಶೋಕ ಶೆಟ್ಟರ್, ಕುಲಪತಿ ಡಾ. ಪ್ರಕಾಶ ತೆವರಿ ಹಾಗೂ ಸಿಬ್ಬಂದಿ ಸಂಶೋಧಕರನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net