

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಟೆಕ್ ಆಡಿಟೋರಿಯಂನಲ್ಲಿ ಗುರುವಾರ ಏರ್ಪಡಿಸಿದ್ದ ಗಣ್ಯ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮವು ವಿಶಿಷ್ಟ ಅನುಭವ ನೀಡುವದರೊಂದಿಗೆ ಫಲಪ್ರದವಾಯಿತು.
ಸಂಕಲ್ಪ ಸೆಮಿಕಂಡಕ್ಟರ್ ಸಂಸ್ಥಾಪಕ ಹಾಗೂ ಖ್ಯಾತ ಉದ್ಯಮಿ ವಿವೇಕ ಪವಾರ, ಪ್ರೈವೇಟ್ ಇಕ್ವಿಟಿ ಇನ್ವೆಸ್ಟರ್ ಮಹೇಶ ಜಾಧವ ಅವರು ಅತಿಥಿಗಳಾಗಿ ಪಾಲ್ಗೊಂಡು ತಮ್ಮ ಉದ್ಯಮ ಅನುಭವ, ಸವಾಲುಗಳು, ಅವುಗಳನ್ನು ಎದುರಿಸುವ ಬಗೆ ಇತ್ಯಾದಿಗಳನ್ನು ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಹೊಸ ಜಗತ್ತಿನ ಪರಿಚಯ ಮಾಡಿದರು.
ಕೆಎಲ್ಇ ತಾಂತ್ರಿಕ ವಿವಿ ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ್ ಅವರು, ಇಬ್ಬರು ಮಹನೀಯರಿಗೆ ಪ್ರಸ್ತುತ ಹಾಗೂ ಜ್ಞಾನ ವರ್ಧನೆಗೆ ಪೂರಕವಾಗುವ ಪ್ರಶ್ನೆಗಳನ್ನು ಮುಂದಿಟ್ಟು ಸಂವಾದಕ್ಕೆ ವಿಶೇಷ ಮೆರಗು ನೀಡಿದರು.
ಇಬ್ಬರು ಮಹನೀಯರ ಉದ್ಯಮ ತಜ್ಞತೆ, ಅನುಭವ ಹಾಗೂ ಭವಿಷ್ಯದಲ್ಲಿ ಯಾವುದಕ್ಕೆ ಹೆಚ್ಚಿನ ಅವಕಾಶ ಮುಂತಾದ ವಿಷಯಗಳನ್ನು ಡಾ. ಶೆಟ್ಟರ್ ಅವರು ಮಾತುಕತೆ ಮೂಲಕ ಹೊರತಂದರು. ಇದು ಅನೇಕರಿಗೆ ಪ್ರೇರಣೆ ನೀಡಿತು.
ಇಬ್ಬರು ತಮ್ಮ ವೃತ್ತಿ ಜೀವನದ ಪಯಣವನ್ನು ಇಲ್ಲಿ ಹಂಚಿಕೊಂಡರು. ಅವರು ಎದುರಿಸಿದ ಸವಾಲುಗಳು, ಸಾಧನೆಯ ಮೈಲಿಗಲ್ಲುಗಳನ್ನು ಹೇಳಿಕೊಂಡರು.
ಕೃತಕ ಬುದ್ಧಿಮತ್ತೆಯಂತಹ (ಎಐ) ಬೆಳೆಯುತ್ತಿರುವ ತಾಂತ್ರಿಕತೆ ಬಗ್ಗೆ ಆಳವಾಗಿ ತಿಳಿದುಕೊಳ್ಳುವುದು, ಜೀವನಪರ್ಯಂತ ಕಲಿಯುವ ಮನೋಭೂಮಿಕೆ ಹಾಗೂ ಎಲ್ಲ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಗುಣ ಇದ್ದು, ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿರುವ ಜಗತ್ತಿನಲ್ಲಿ ಯಾರಿಗೆ ಹೆಚ್ಚಿನ ಆಸಕ್ತಿ ಇರುತ್ತದೆಯೋ, ಕ್ರಿಯಾಶೀಲತೆ ಹಾಗೂ ಧೈರ್ಯಶಾಲಿಗಳಾಗಿದ್ದಾರೋ ಅವರಿಗೆ ಭವಿಷ್ಯ ಇದೆ ಎಂದು ವಿವೇಕ ಪವಾರ ಹಾಗೂ ಮಹೇಶ ಜಾಧವ ಹೇಳಿದರು.
ಕೈಗಾರಿಕೆ ಹಾಗೂ ಶೈಕ್ಷಣಿಕ ಕ್ಷೇತ್ರದ ಮಧ್ಯೆ ಇರುವ ಅಂತರ ಕಡಿಮೆಯಾಗಬೇಕಿದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಕಲಿಕೆ ಜತೆಗೆ ಸಂಶೋಧನೆ ಹಾಗೂ ಸಹಾನುಭೂತಿಯನ್ನು ಬೆಳೆಸಿಕೊಳ್ಳಬೇಕು. ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು ಬಹಳಷ್ಟು ಆಧುನಿಕ ಶಿಕ್ಷಣವನ್ನು ಮೈಗೂಡಿಸಿಕೊಂಡು ಪ್ರಗತಿಪರ ಆಲೋಚನೆ ಮಾಡುವವರಿಗೆ ಪ್ರೇರಣೆ ನೀಡುತ್ತಿದೆ. ಭವಿಷ್ಯಕ್ಕೆ ಅಗತ್ಯವಾದ ಇಂಜಿನಿಯರ್ಗಳನ್ನು ಸೃಷ್ಟಿಸುವ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಲಾಸ್ ರೂಂ ಹಾಗೂ ಅದರಾಚೆಯೂ ಏನೆಲ್ಲ ಕಲಿಯಬಹುದು ಎಂಬುದನ್ನು ಇಬ್ಬರು ಮಹನೀಯರು ಮನದಟ್ಟು ಮಾಡಿಕೊಟ್ಟರು. ಹೊಸತನದ ಆಲೋಚನೆಗಳಿಗೆ ಇಂಬು ನೀಡುವಂತೆ ಪ್ರೇರಣೆ ನೀಡಿದರು.