

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮ್ಯಾನೇಜಮೆಂಟ್ ಸ್ಟಡೀಸ್ ಆಂಡ್ ರಿಸರ್ಚ್ (ಎಸ್ಎಂಎಸ್ಆರ್) ರಿಟೇಲ್ ಮ್ಯಾನೇಜಮೆಂಟ್ನಲ್ಲಿ 3 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದೆ.
ತಂತ್ರಜ್ಞಾನದ ಪ್ರಗತಿ ಹಾಗೂ ಗ್ರಾಹಕರ ಆದ್ಯತೆಗಳಿಂದ ಇಂದು ರಿಟೇಲ್ ವಲಯ ಕ್ಷಿಪ್ರ ಬೆಳವಣಿಗೆಯನ್ನು ಕಾಣುತ್ತಿದ್ದು, ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಪದವಿ ವಿದ್ಯಾರ್ಥಿಗಳು ಹಾಗೂ ಉದ್ಯಮದ ವೃತ್ತಿಪರರಿಗೆ ಈ ಕೋರ್ಸ್ನಿಂದ ಸಾಕಷ್ಟು ಅನುಕೂಲವಾಗಲಿದೆ. ತಾಂತ್ರಿಕ ಪ್ರಗತಿ, ಉತ್ತಮ ಅಭ್ಯಾಸ ಕ್ರಮಗಳು ಹಾಗೂ ಉದ್ಯಮದ ಇತ್ತೀಚಿನ ಪ್ರವೃತ್ತಿಗಳನ್ನು ಒಳಗೊಂಡು ತಜ್ಞರು ಪಠ್ಯಕ್ರಮವನ್ನು ವಿನ್ಯಾಸಗೊಳಿಸಿದ್ದಾರೆ.
ಅನುಭವಿ ಅಧ್ಯಾಪಕರು ಹಾಗೂ ಉದ್ಯಮದ ವೃತ್ತಿಪರರು ಬೋಧನೆ ಮಾಡುವರು. ಈ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಅವಕಾಶವಿದೆ. ಕೋರ್ಸ್ ಪೂರ್ಣಗೊಳಿಸಿದ ಬಳಿಕ ಉದ್ಯೋಗ ಗಿಟ್ಟಿಸಲು ಸಹಾಯ ಮಾಡಲಾಗುವುದು ಎಂದು ಕೆಎಲ್ಇ ತಾಂತ್ರಿಕ ವಿವಿ ತಿಳಿಸಿದೆ.