

ಬೆಳಗಾವಿ: ಬೆಳಗಾವಿಯ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅನುಭವ ಮಂಟಪ ಸಭಾಂಗಣದಲ್ಲಿ ಜು.25ರ ಬೆಳಗ್ಗೆ 10.30 ಗಂಟೆಗೆ ‘ಕೆಎಲ್‌ಇ ರ್ಟಿಲಿಟಿ ಸೆಂಟರ್’ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸುವರು.
ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕಾಹೆರ ಉಪಕುಲಪತಿ ಡಾ.ನಿತಿನ್ ಗಂಗಾನೆ, ಜೆಎನ್‌ಎಂಸಿ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ, ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ದಯಾನಂದ ಎಂ. ಪಾಲ್ಗೊಳ್ಳುವರು.
ಗುಣಾತ್ಮಕ ಶಿಕ್ಷಣದ ಜತೆಗೆ ಅತ್ಯಾಧುನಿಕ ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ಕೈಗೆಟುಕಬೇಕೆನ್ನುವ ಗುರಿ ಹೊಂದಿರುವ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಹೊಂದಿರುವ ‘ಕೆಎಲ್‌ಇ ರ್ಟಿಲಿಟಿ ಸೆಂಟರ್’ ವಿಶೇಷವಾಗಿ ಮಕ್ಕಳಿಲ್ಲ ಎಂದು ಕೊರಗುವ ಉತ್ತರ ಕರ್ನಾಟಕ ಭಾಗದ ದಂಪತಿಗಳಿಗೆ ಹೊಸ ಭರವಸೆ ಮೂಡಿಸುತ್ತಿದೆ. ಕೆಎಲ್‌ಇ ರ್ಟಿಲಿಟಿ ಸೆಂಟರ್‌ನಲ್ಲಿ ಅಳವಡಿಸಿರುವ ಅತ್ಯಾಧುನಿಕ 3ಡಿ ಲ್ಯಾಪ್ರೋಸ್ಕೋಪಿ ಮತ್ತು ಡಯಾಗ್ನೋಸ್ಟಿಕ್/ಆಪರೇಟಿವ್ ಹಿಸ್ಟೆರೋಸ್ಕೋಪಿ ತಂತ್ರಜ್ಞಾನ ಮೂಲಕ ಗರ್ಭಾಶಯ, ಟ್ಯೂಬ್ ಅಥವಾ ಶರೀರದ ಇತರ ಭಾಗಗಳಲ್ಲಿ ಸಂತಾನಕ್ಷಮತೆ ಗುಣಲಕ್ಷಣವನ್ನು ನಿಖರವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಸೌಲಭ್ಯ ಹೊಂದಿರುವುದು ವಿಶೇಷ.