ಹುಬ್ಬಳ್ಳಿ: ಸಹಾನುಭೂತಿಯುಳ್ಳ ಮತ್ತು ಕೌಶಲಪೂರ್ಣ ದಾದಿಯರಿಗೆ ಜಾಗತಿಕವಾಗಿ ಹೆಚ್ಚು ಬೇಡಿಕೆ ಇದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂದು ಬೆಂಗಳೂರಿನ ರಾಮಯ್ಯ ಸಂಸ್ಥೆಯ ಶುಶ್ರೂಷಾ ಶಿಕ್ಷಣ ಮತ್ತು ಸಂಶೋಧನೆ ಕಾಲೇಜಿನ ಪ್ರಾಂಶುಪಾಲ ಡಾ. ಸೋನಾಲಿ ಜಾಧವ ಹೇಳಿದರು.
ಇಲ್ಲಿಯ ಕೆಎಲ್ಇ ಸಂಸ್ಥೆಯ ಶುಶ್ರೂತಾ ವಿಜ್ಞಾನ ಮಹಾವಿದ್ಯಾಲಯದಲ್ಲಿ 18ನೇ ಘಟಿಕೋತ್ಸವ ಸ್ಪರ್ಶ 2025 ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಮುಂಬರುವ ದಿನಗಳಲ್ಲಿ ಹೇರಳ ಅವಕಾಶಗಳು ಒದಗಿ ಬರಲಿವೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜತೆಗೆ ಪ್ರಾಯೋಗಿಕ ಕಲಿಕೆಯನ್ನು ಹೆಚ್ಚು ಅಳವಡಿಸಿಕೊಳ್ಳಬೇಕು. ನರ್ಸಿಂಗ್ ವೃತ್ತಿಯಲ್ಲಿ ಆತ್ಮವಿಶ್ವಾಸ, ಜ್ಞಾನ ಗಳಿಸಿಕೊಳ್ಳಬೇಕು ಎಂದರು.
ರಾಜ್ಯ ಕಾನೂನು ವಿವಿ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ ಮಾತನಾಡಿ, ಪ್ರತಿಷ್ಠಿತ ಸಂಸ್ಥೆಯಲ್ಲಿ ನರ್ಸಿಂಗ್ ಅಧ್ಯಯನ ಮಾಡಿ ಉತ್ತಮ ಉದ್ಯೋಗ ಮಾಡಬಹುದಾಗಿದೆ. ದಾದಿಯರು ಹೋದಲ್ಲೆಲ್ಲ ಶಿಸ್ತು, ಘನತೆ ಮತ್ತು ಸಮರ್ಪಣೆಯ ಜ್ಯೋತಿಯನ್ನು ಯಾವಾಗಲೂ ಹೊತ್ತೊಯ್ಯುತ್ತಾರೆ ಎಂದು ಪ್ರಶಂಸಿಸಿದರು.
ಅಂಕೋಲಾ ಕೆಎಲ್ಇ ಸಂಸ್ಥೆಯ ಆರ್. ನಟರಾಜ ಮಾತನಾಡಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿಯಲ್ಲಿ ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕ ಪಡೆದ ಪೂಜಾ ಅವರನ್ನು ಸನ್ಮಾನಿಸಲಾಯಿತು.
104 ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು. ಬಿ.ಎಸ್ಸಿ ನರ್ಸಿಂಗ್ ಮತ್ತು ಜಿಎನ್ಎಂನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಪ್ರಾಂಶುಪಾಲ ಡಾ. ಸಂಜಯ್ ಪೀರಾಪುರ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ. ಸೋಮಶೇಖರಯ್ಯ ಕಲ್ಮಠ ವಾರ್ಷಿಕ ವರದಿ ಮಂಡಿಸಿದರು. ಪ್ರಾಧ್ಯಾಪಕ ಡಾ. ಆಶಾ ಭಾತಖಂಡೆ ವಂದಿಸಿದರು. ವಾಣಿ ಕೆ. ಮತ್ತು ಶ್ರುತಿ ಬುಲ್ಬುಲೆ ನಿರೂಪಿಸಿದರು.