ಶಿಕ್ಷಣ, ಆರೋಗ್ಯಕ್ಕೆ ಹೆಸರಾದ ಕೆಎಲ್‌ಇ

22GKK4
Published on

ಗೋಕಾಕ: ಸಪ್ತರ್ಷಿಗಳಿಂದ ಸ್ಥಾಪಿತವಾದ ಕೆಎಲ್‌ಇ ಸಂಸ್ಥೆ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆಯಿಂದ ದೇಶ-ವಿದೇಶಗಳಲ್ಲಿ ಹೆಸರಾಗಿದೆ ಎಂದು ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಶ್ರೀಮಹಾದೇವಪ್ಪಣ್ಣ ಮುನವಳ್ಳಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಕೆಎಲ್‌ಇ ಸಂಸ್ಥೆ ಹಲವು ಶಾಲಾ-ಕಾಲೇಜು ಪ್ರಾರಂಭಿಸಿದ್ದು, ಐದು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 100 ಹಾಸಿಗೆಗಳ ಆಸ್ಪತ್ರೆ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಸುಸಜ್ಜಿತ ಆಯುರ್ವೇದ ಆಸ್ಪತ್ರೆ ಆರಂಭಿಸಲಾಗುವುದು ಎಂದು ತಿಳಿಸಿದರು.

ನಿವೃತ್ತ ಅಧೀಕ್ಷಕ ಅಭಿಯಂತ ಬಿ.ಡಿ.ನಸಲಾಪುರೆ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಬೇಧ-ಭಾವ ಲೆಕ್ಕಿಸದೆ ನಾವೆಲ್ಲ ಭಾರತೀಯರೆಂಬ ಉದಾತ್ತ ಮನೋಭಾವದಿಂದ ವ್ಯಾಸಾಂಗ ಮಾಡಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಡಿ.ಚುನಮರಿ, ಸದಸ್ಯ ಓಂಪ್ರಕಾಶ ಅಂಗಡಿ, ರಾಣಿ ಚನ್ನಮ್ಮ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷೆ ರೂಪಾ ಮುನವಳ್ಳಿ, ಪ್ರಾಚಾರ್ಯೆ ನಂದಾ ಚುನಮರಿ, ಸಂಸ್ಥಾಪಕ ಪ್ರಾಚಾರ್ಯೆ ಅನುಪಾ ಕೌಶಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net