ಎನ್ಎಐಎನ್ ಕಾರ್ಯಕ್ರಮಕ್ಕೆ ಕೆಎಲ್ಇ ಐಟಿ ಆಯ್ಕೆ

Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯವು ಕರ್ನಾಟಕ ಸರ್ಕಾರದ ಇಎಲ್, ಐಟಿ ಮತ್ತು ಬಯೊಟೆಕ್ನಾಲಜಿ (ಇಎಲ್, ಐಟಿ ಮತ್ತು ಬಿಟಿ) ಇಲಾಖೆ, ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್) ವತಿಯಿಂದ ಪ್ರಸ್ತುತಗೊಳ್ಳುತ್ತಿರುವ ಕರ್ನಾಟಕ ಸ್ಟಾರ್ಟಪ್ ಪಾಲಿಸಿಯ 2022-27ರ ಅಡಿಯಲ್ಲಿ ನ್ಯೂ ಏಜ್ ಇನ್ನೋವೇಶನ್ ನೆಟ್ವರ್ಕ್ (ಎನ್ಎಐಎನ್) 2.0 ಕಾರ್ಯಕ್ರಮಕ್ಕೆ ಆಯ್ಕೆಯಾಗಿದೆ.

ಮಹಾವಿದ್ಯಾಲಯವು ಹೊಸ ಆವಿಷ್ಕಾರ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಬದ್ಧವಾಗಿದ್ದು, ಈ ಗೌರವವು ಇದಕ್ಕೆ ಇನ್ನಷ್ಟು ಪೂರಕವಾಗಿದೆ.

ಎನ್ಎಐಎನ್ 2.0 ಕಾರ್ಯಕ್ರಮವು ರಾಜ್ಯದ ಯುವ ಉದ್ಯಮಶೀಲತೆಗೆ ಶಕ್ತಿ ನೀಡಲು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದರಿಂದ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯವು ಶೈಕ್ಷಣಿಕ ಪರಿಸರದಲ್ಲಿ ಆವಿಷ್ಕಾರಾತ್ಮಕ ಚಟುವಟಿಕೆಗಳನ್ನು ಉತ್ತೇಜಿಸಲು ಅಗತ್ಯವಾದ ಮೂಲಸೌಕರ್ಯ, ಮಾರ್ಗದರ್ಶನ ಮತ್ತು ಉದ್ಯಮಪರ ಸಂಪರ್ಕಗಳಿಗೆ ಅನುವು ಮಾಡಿಕೊಡುತ್ತದೆ.

ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲ ಡಾ. ಮನು ಟಿ.ಎಂ. ಅವರು ಈ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

"ಈ ಸಾಧನೆ ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ. ಎನ್ಎಐಎನ್ 2.0 ಕಾರ್ಯಕ್ರಮವು ನಮ್ಮ ವಿದ್ಯಾರ್ಥಿ ಉದ್ಯಮಿಗಳಿಂದ ಹೊರಹೊಮ್ಮಿದ ಆವಿಷ್ಕಾರಗಳನ್ನು ಮುಂದಿನ ಹಂತಕ್ಕೆ ತಲುಪಿಸಲು ಮಹತ್ತರ ಸಾಧನೆ ಮಾಡಲಿದೆ' ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net