

ಬೆಳಗಾವಿ:ಕೆಎಲ್‌ಇ ಸಂಸ್ಥೆಯ ಆಸ್ಪತ್ರೆಗಳು ಎಲ್ಲ ಸಮುದಾಯಗಳ ಆರೋಗ್ಯ ಕಾಳಜಿ ವಹಿಸುತ್ತಿವೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ನಗರದ ಉದ್ಯಮಬಾಗ್‌ನ ಡಾ. ಎಂ.ಎಸ್. ಶೇಷಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಿಸಿರುವ ಕೆಎಲ್‌ಇ ವೆಲ್‌ನೆಸ್ ಸೆಂಟರ್‌ಗೆ ಶುಕ್ರವಾರ ಶ್ರೀನಿವಾಸ ಇಂಡಕ್ಷನ್ ಹಾರ್ಡೆನಿಂಗ್ ಕಂಪನಿಯಿಂದ ನೀಡಲಾದ ಆಂಬುಲೆನ್ಸ್ ದೇಣಿಗೆ ನೀಡುವ ಕಾರ್ಯಕ್ರಮ ಹಾಗೂ ಹೊಸ ಔಷಧ ಅಂಗಡಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಶತಮಾನದ ಇತಿಹಾಸ ಇರುವ ಕೆಎಲ್‌ಇ ಸಂಸ್ಥೆಯು ಎಂದಿಗೂ ನಾಡಿನ ಜನರಿಗೆ ಆರೋಗ್ಯ, ಶಿಕ್ಷಣ ಸೌಲಭ್ಯಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಕಾರ್ಮಿಕರಿಗೆ ಹಾಗೂ ಈ ಭಾಗದ ಜನರಿಗೆ ಆರೋಗ್ಯ ಸೇವೆಗಳು ಶೀಘ್ರಗತಿಯಲ್ಲಿ ತಲುಪಬೇಕು ಎಂಬ ಉದ್ದೇಶದಿಂದ ಕೆಎಲ್‌ಇ ವೆಲ್‌ನೆಸ್ ಸೆಂಟರ್ ಅನ್ನು ಪ್ರಾರಂಭಿಸಲಾಗಿದೆ. ಅದಕ್ಕೆ ಪ್ರೇರಕವೆಂಬಂತೆ ಶ್ರೀನಿವಾಸ ಇಂಡಕ್ಷನ್ ಹಾರ್ಡೆನಿಂಗ್ ಕಂಪನಿಯ ಮಾಲೀಕ ದಯಾನಂದ ನೇತಲ್ಕರ ಅವರು ಆಂಬುಲೆನ್ಸ್ ದೇಣಿಗೆ ನೀಡಿದ್ದಾರೆ. ಈ ಅಂಬ್ಯುಲೆನ್ಸ್ ಸಾರ್ವಜನಿಕರಿಗೆ ಹಾಗೂ ಕಾರ್ಮಿಕರ ಆರೋಗ್ಯ ಸೇವೆಗೆ ಎಲ್ಲ ಸಮಯದಲ್ಲಿ ತ್ವರಿತವಾಗಿ ಲಭ್ಯವಾಗಲಿದೆ ಎಂದರು.
ದಯಾನಂದ ನೇತಲ್ಕರ ಮಾತನಾಡಿ, ಸಮಾಜಕ್ಕೆ ಕೆಎಲ್‌ಇ ಸಂಸ್ಥೆಯ ಕೊಡುಗೆ ಅಪಾರವಾಗಿದೆ. ಈ ಸಂಸ್ಥೆಯ ಮೂಲಕ ಸಾರ್ವಜನಿಕ ಸೇವೆಗೆ ಆಂಬುಲೆನ್ಸ್ ನೀಡಿದ್ದು ಸಾರ್ಥಕವೆನಿಸಿದೆ ಎಂದರು. ವೆಲ್‌ನೆಸ್ ಸೆಂಟರ್‌ನಲ್ಲಿ ಹೊಸ ಔಷಧ ಅಂಗಡಿ ಉದ್ಘಾಟಿಸಲಾಯಿತು. ಕೆಎಲ್‌ಇ ಯುಎಸ್‌ಎಂ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ, ಡಾ. ಎಸ್.ಸಿ. ಧಾರವಾಡ, ಸಚಿನ್ ಸಬ್ನಿಸ್, ಹೇಮೇಂದ್ರ ಪೋರವಾಲ್, ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಎಸ್.ಎಫ್. ಪಾಟೀಲ, ಡಾ. ಮಹೇಶ ಸತ್ತಿಗೇರಿ, ಕೆಎಲ್‌ಇ ಹೋಮಿಯೋಪಥಿಕ್ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎ. ಉಡಚನಕರ ಇತರರಿದ್ದರು.