ಕೆಎಲ್‌ಇ ಸಂಸ್ಥೆಯ ಸೇವೆ ಶ್ಲಾಘನೀಯ

2Manju7
ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ಕ್ಯಾನ್ಸರ್ ಆಸ್ಪತ್ರೆಗೆ ಸೋಮವಾರ ಶರದ ಪವಾರ ಭೇಟಿ ನೀಡಿದರು. ಡಾ.ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಡಾ.ವಿ.ಎಸ್.ಸಾಧುನವರ ಇತರರಿದ್ದರು.
Published on

ಬೆಳಗಾವಿ: ಸದಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕೆಎಲ್‌ಇ ಸಂಸ್ಥೆಯ ಅತ್ಯಂತ ಸುಸಜ್ಜಿತ ಹಾಗೂ ಸಕಲ ವ್ಯವಸ್ಥೆ ಒಳಗೊಂಡಿರುವ ಕ್ಯಾನ್ಸರ್ ಆಸ್ಪತ್ರೆಯು ರೋಗಿಗಳ ಪಾಲಿನ ಸಂಜೀವಿನಿಯಾಗಲಿದೆ ಎಂದು ಎನ್‌ಸಿಪಿ ಅಧ್ಯಕ್ಷ ಶರದ ಪವಾರ ಹೇಳಿದರು.

ನಗರದಲ್ಲಿ ಕೆಎಲ್ಇ ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ಕ್ಯಾನ್ಸರ್ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ಈ ಆಸ್ಪತ್ರೆಗೆ ನಾನೇ ಭೂಮಿಪೂಜೆ ನೆರವೇರಿಸಿದ್ದೆ. ಈಗ ಅತ್ಯಾಧುನಿಕ ಆಸ್ಪತ್ರೆ ಮೈದಳೆದು ನಿಂತಿದೆ. ಅತ್ಯಂತ ಸುಸಜ್ಜಿತ ಹಾಗೂ ಸಕಲ ವ್ಯವಸ್ಥೆಯುಳ್ಳ ಆಸ್ಪತ್ರೆ ನೋಡಿ ಬಹಳ ಖುಷಿಯಾಯಿತು ಎಂದರು.

ಕೆಎಲ್ಇ ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ಹಾಗೂ ವಿನ್ಯಾಸ ಬಹಳ ಸುಂದರವಾಗಿದ್ದು, ಈ ಆಸ್ಪತ್ರೆಯು ತನ್ನ ಗುಣಮಟ್ಟದ ಚಿಕಿತ್ಸೆಗೆ ಸಾಕ್ಷಿಯಾಗಲಿದೆ. ಕೆಎಲ್‌ಇ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಗೆ ಈ ಆಸ್ಪತ್ರೆ ಕೈಗನ್ನಡಿ ಎಂದು ಶ್ಲಾಘಿಸಿದರು.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಈಗಾಗಲೇ ಎಲ್ಲ ಕಾಮಗಾರಿಗಳು ಮುಗಿದಿದ್ದು, ಒಂದು ವಿಭಾಗವನ್ನು ಪ್ರಾರಂಭಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಕ್ಯಾನ್ಸರ್ ಆಸ್ಪತ್ರೆಯು ಜನಸೇವೆಗೆ ತೆರೆದುಕೊಳ್ಳಲಿದೆ. ಈ ಭಾಗದಲ್ಲಿ ಕ್ಯಾನ್ಸರ್‌ಗೆ ಸಮಗ್ರ ಚಿಕಿತ್ಸೆ ನೀಡುವ ಅತ್ಯಾಧುನಿಕ ಕೇಂದ್ರಗಳ ಅವಶ್ಯಕತೆ ಬಹಳವಿತ್ತು. ಅದನ್ನು ಅರಿತು ಒಂದೇ ಸೂರಿನಡಿ ಎಲ್ಲ ಚಿಕಿತ್ಸೆ ಲಭಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಸುಮಾರು 300 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಕೆಲವೇ ದಿನಗಳಲ್ಲಿ ಜನಸೇವೆಗೆ ಅರ್ಪಿಸಲಾಗುವುದು ಎಂದು ಹೇಳಿದರು.

ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಅವರು ಆಸ್ಪತ್ರೆಯ ಕುರಿತು ಸಮಗ್ರ ಮಾಹಿತಿ ವಿವರಿಸಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಡಾ.ವಿ.ಎಸ್.ಸಾಧುನವರ, ಕಾಹೆರನ ಉಪಕುಲಪತಿ ಡಾ.ನಿತಿನ ಗಂಗಾನೆೆ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ, ಉಪಪ್ರಾಚಾರ್ಯ ಡಾ. ರಾಜೇಶ ಪವಾರ, ಡಾ.ವಿ.ಎಂ.ಪಟ್ಟಣಶೆಟ್ಟಿ, ಆಸ್ಪತ್ರೆ ಮುಖ್ಯ ನಿರ್ವಹಣಾಧಿಕಾರಿ ನವೀನ.ಎನ್. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net