

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಇಂದಿನ ವೈದ್ಯ ವಿಜ್ಞಾನದ ತಂತ್ರಜ್ಞಾನಗಳು ಜೀವ ರಕ್ಷಕಗಳಾಗಿವೆ. ಇವುಗಳ ಜ್ಞಾನ ಜಗದೆಲ್ಲೆಡೆ ಪಸರಿಸುವಂತೆ ಮಾಡಲು ಇನ್ನಷ್ಟು ಇಂತಹ ವೇದಿಕೆಗಳ ಅಗತ್ಯವಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ಕೆಎಲ್‌ಇ ಸೆಂಟಿನರಿ ಕನ್ವೆಷನ್ ಹಾಲ್‌ನ ಡಾ.ಬಿ.ಎಸ್.ಕೊಡಕನಿ ಸಭಾಭವನದಲ್ಲಿ ಈಚೆಗೆ ಇಂಡಿಯನ್ ಅಥ್ರೋಸ್ಕೊಪಿ ಸೊಸೈಟಿಯಿಂದ ಹಮ್ಮಿಕೊಂಡಿದ್ದ ಒಂದು ದಿನದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ನಮ್ಮ ದೇಶದಲ್ಲಿ ಜಗತ್ತೇ ತಿರುಗಿ ನೋಡುವಂತಹ ವೈದ್ಯ ವಿಜ್ಞಾನವಿದೆ. ಅವುಗಳನ್ನು ಒರೆಗೆ ಹಚ್ಚುವ ಇಂತಹ ವೇದಿಕೆ ಮೇಲಿಂದ ಮೇಲೆ ಕಲ್ಪಿಸಿ ಹೊಸತನ ಕಂಡುಕೊಳ್ಳಬಹುದಾಗಿದೆ. ಕಳೆದ ವರ್ಷ ಚೀನಾದಲ್ಲಿ ನಡೆದ ವೈದ್ಯಕೀಯ ಸಮ್ಮೇಳನದಲ್ಲಿ ವೈದ್ಯಕೀಯ ಪರಿಕರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಉತ್ತಮ ತಂತ್ರಜ್ಞಾನ ಹೊಂದಿದ್ದು, ಅವುಗಳನ್ನು ನಮ್ಮಲ್ಲೂ ಅಳವಡಿಸಿಕೊಂಡು ಜನ ಸೇವೆ ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಕೆಎಲ್‌ಇ ಆಸ್ಪತ್ರೆಯ ಯುವ ವೈದ್ಯರನ್ನು ಶ್ಲಾಘಿಸಿದ ಅವರು, ಇಂತಹ ವೇದಿಕೆ ಸೃಷ್ಟಿಸಿ ದೇಶದ ನಾನಾ ಭಾಗಗಳ ವೈದ್ಯರಿಗೆ ತಮ್ಮ ಜ್ಞಾನ ವೃದ್ಧಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತಿರುವ ಇಂಡಿಯನ್ ಅಥ್ರೋಸ್ಕೊಪಿ ಸೊಸೈಟಿಗೆ ಅಭಿನಂದನೆ ಎಂದರು.
ಸೊಸೈಟಿಯ ಮಾಜಿ ಕಾರ್ಯದರ್ಶಿ ಡಾ.ಸಂದೀಪ ಬಿರಾರಿಸ್ ಮಾತನಾಡಿ, ತಂತ್ರಜ್ಞಾನದಲ್ಲಿ ಅತ್ಯದ್ಭುತ್ ಪ್ರಗತಿ ಸಾಧಿಸಿರುವ ವೈದ್ಯ ವಿಜ್ಞಾನವು ಇಂದಿನ ಯುವ ವೈದ್ಯರಿಗೆ ಅರಿತುಕೊಳ್ಳಲು ಸುಲಭ ಸಾಧ್ಯ. ಆದರೆ, ಅದನ್ನು ತಿಳಿಸಲು ಇಂತಹ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಜ್ಞಾನದ ಕಣಜಗಳಾಗಿವೆ ಎಂದು ಹೇಳಿದರು.
ಕಾಹೆರ್ ಕುಲಪತಿ ಡಾ.ನಿತಿನ ಗಂಗಾನೆ, ಕೆಎಲ್‌ಇ ಯುಎಸ್‌ಎಂ ನಿರ್ದೇಶಕ ಡಾ.ಎಚ್.ಬಿ ರಾಜಶೇಖರ, ಜವಾಹರಲಾಲ ನೆಹರು ವೈದ್ಯಕೀಯ ಕಾಲೇಜಿನ ಪಾಚಾರ್ಯೆ ಡಾ.ಎನ್.ಎಸ್.ಮಹಾಂತಶೆಟ್ಟಿ, ಉಪ ಪ್ರಾಚಾರ್ಯ ಡಾ.ರಾಜೇಶ ಪವಾರ, ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ.ಧಾರವಾಡ, ಡಾ.ವಿ.ಜಿ.ಮುರಕಿಭಾವಿ, ಡಾ.ಪ್ರಕಾಶ ವಾಲಿ, ಡಾ.ಆರ್.ಎಸ್ ಜತ್ತಿ ಇತರರಿದ್ದರು.
ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ 150ಕ್ಕೂ ಅಧಿಕ ವೈದ್ಯರು ಭಾಗವಹಿಸಿದ್ದರು. ಈ ವೇಳೆ ಇಬ್ಬರು ರೋಗಿಗಳ ಮೊಣಕಾಲಿನ ಅರ್ಥ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ವಿಡಿಯೋ ಮೂಲಕ ನೇರ ಪ್ರಸಾರ ಮಾಡಲಾಯಿತು. ಕಾರ್ಯಕ್ರಮವನ್ನು ಯುವ ಎಲುಬು ಕೀಲು ತಜ್ಞ ಡಾ.ಅಜಿತ್ ಹುಂಡೇಕರ, ಡಾ.ಮುರುಗೇಶ ಕುರಣಿ, ಡಾ.ಉತ್ಕರ್ಷ ಬುರ್ಲಿ ಮತ್ತು ಡಾ. ಗಂಗಾಧರ ಭೂತಿ ನಿರೂಪಿಸಿದರು. ಡಾ. ಅನಿಲ ಪಾಟೀಲ ಸ್ವಾಗತಿಸಿದರು. ಡಾ.ಎಂ.ಎನ್.ಪಾಟೀಲ ವಂದಿಸಿದರು.
---
12 ಜಗ್ಗು 5
ಇಂಡಿಯನ್ ಅಥ್ರೋಸ್ಕೊಪಿ ಸೊಸೈಟಿಯಿಂದ ಹಮ್ಮಿಕೊಂಡಿದ್ದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಡಾ.ಪ್ರಭಾಕರ ಕೋರೆ, ಡಾ.ಸಂದೀಪ ಬಿರಾರಿಸ್, ಡಾ.ನಿತಿನ ಗಂಗಾನೆ, ಡಾ.ಎಚ್.ಬಿ ರಾಜಶೇಖರ, ಡಾ.ಎನ್.ಎಸ್.ಮಾಹಾಂತಶೆಟ್ಟಿ ಇತರರಿದ್ದರು.